ಕೊಪ್ಪಳ: ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದು ಬೇಡ ಎಂದು ಸೂಚಿಸಿದ ಹಿಂದೆಯೇ, ಅವರ ಸ್ಪರ್ಧೆಗೆ ಕ್ಷೇತ್ರ ಬಿಟ್ಟುಕೊಡಲು ಜಿಲ್ಲೆಯಲ್ಲಿ ಪೈಪೋಟಿ ಏರ್ಪಟ್ಟಿದೆ.
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಕೊಪ್ಪಳದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ‘ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ. ಇಲ್ಲಿ ಜಾತಿ ಲೆಕ್ಕಾಚಾರವು ಇದೆ ಎಂಬ ಚರ್ಚೆ ನಡೆದಿದೆ.
ಕುಷ್ಟಗಿ ಕ್ಷೇತ್ರದಲ್ಲಿ 40 ಸಾವಿರಕ್ಕೂ ಹೆಚ್ಚು ಮತ್ತು ಕೊಪ್ಪಳ ಕ್ಷೇತ್ರದಲ್ಲಿ 35 ಸಾವಿರದಷ್ಟು ಕುರುಬರು ಇದ್ದಾರೆ. ಕೊಪ್ಪಳದಲ್ಲಿ ತಮ್ಮದೇ ಸಮುದಾಯದ ರಾಘವೇಂದ್ರ ಹಿಟ್ನಾಳರಿಗೆ ಕುರುಬರ ಬೆಂಬಲವಿದೆ.
ಆದರೆ, ಕುಷ್ಟಗಿಯಲ್ಲಿ ಕುರುಬರು ಹೆಚ್ಚಾಗಿ ಬಿಜೆಪಿ ಮುಖಂಡ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರತ್ತ ಒಲವು ಹೊಂದಿದ್ದಾರೆ. ಅವರು ಈ ಬಾರಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
‘ಮುಖ್ಯಮಂತ್ರಿ ಆಗಿದ್ದವರು ಜಿಲ್ಲೆಯಲ್ಲಿ ಸ್ಪರ್ಧಿಸಿದರೆ, ಹೆಚ್ಚು ಅನುದಾನ ತರುತ್ತಾರೆ‘ ಎಂಬ ಆಶಯ ಹಿಟ್ನಾಳ, ಬಯ್ಯಾಪುರ ಅವರದ್ದು. ಹಿಟ್ನಾಳ ಅವರು ಸಿದ್ದರಾಮಯ್ಯ ಆಪ್ತರಲ್ಲಿ ಗುರುತಿಸಿಕೊಂಡಿದ್ದಾರೆ.
ಕೊಪ್ಪಳ ನಂಟು: 1991ರ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕೊಪ್ಪಳದಿಂದ ಜನತಾ ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋಲುಂಡಿದ್ದರು. ಜಿಲ್ಲೆಯ ನಂಟು ಹೊಂದಿದ್ದು, ರಾಜಕೀಯ ಸಭೆ, ಸಮಾರಂಭ ಮತ್ತು ಆಪ್ತರ ಕುಟುಂಬದ ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.
2022ರ ಡಿಸೆಂಬರ್‌ನಲ್ಲಿ ಕುಷ್ಟಗಿಯಲ್ಲಿ ನಡೆದಿದ್ದ ಬಯ್ಯಾಪುರ ಜನ್ಮದಿನ, ಕಾಂಗ್ರೆಸ್ ಸಮಾವೇಶದ ವೇಳೆಯು ಕೆಪಿಸಿಸಿ ಉಪಾಧ್ಯಕ್ಷ ಹಸನಸಾಬ್ ದೋಟಿಹಾಳ್, ‘ಸಿದ್ದರಾಮಯ್ಯ ಅವರು ಕುಷ್ಟಗಿಯಿಂದ ಸ್ಪರ್ಧಿಸಿದರೆ ಗೆಲ್ಲಿಸುವ ಹೊಣೆ ನಾನು ಹಾಗೂ ಬಯ್ಯಾಪುರ ಹೊರುತ್ತೇವೆ’ ಎಂದು ಭರವಸೆ ನೀಡಿದ್ದರು.
ಆಗ ಸಿದ್ದರಾಮ ಅವರು, ‘ಜಿಲ್ಲೆಯ ಜನ ಪ್ರೀತಿ ತೋರಿದ್ದಾರೆ. ಆದರೆ, ಚುನಾವಣೆಯಲ್ಲಿ ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ’ ಎಂದಿದ್ದರು. ಈಗ ಬದಲಾದ ಸ್ಥಿತಿಯಲ್ಲಿ ಅವರ ನಿರ್ಧಾರ ಏನು ಎಂಬ ಕುತೂಹಲವಿದೆ.
****
ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಬಯಸಿದರೆ ಕ್ಷೇತ್ರ ಬಿಟ್ಟುಕೊಡುವೆ. ಗೆಲ್ಲಿಸುವ ಜವಾಬ್ದಾರಿ ಹೊರುವೆ.
- ಅಮರೇಗೌಡ ಬಯ್ಯಾಪುರ, ಶಾಸಕ
ಸಿದ್ದರಾಮಯ್ಯ ಅವರು ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಿದರೆ ಅದಕ್ಕಿಂತ ಅದೃಷ್ಟ ಇನ್ನೊಂದಿಲ್ಲ. ಅವರ ಗೆಲುವಿಗೆ ನಾನೇ ಹೆಗಲಾಗುವೆ.
- ರಾಘವೇಂದ್ರ ಹಿಟ್ನಾಳ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.