ಬೆಂಗಳೂರು: ನಾಡಪ್ರಭು ಕೆಂಪೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಅನೇಕ ಸಾಮ್ಯತೆಗಳಿವೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವತ್ಥ ನಾರಾಯಣ ಅವರು ಅಭಿಪ್ರಾಯಪಟ್ಟಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸಲಾಗಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ‘ಮೋದಿ ಅವರು ಆಧುನಿಕ ಕೆಂಪೇಗೌಡ’ ಎಂದಿದ್ದರು.
‘ಧರ್ಮ ಪ್ರಭು (ಧರ್ಮ ರಕ್ಷಕ) ಕೆಂಪೇಗೌಡರಂತಹ ದೃಷ್ಟಿಕೋನವನ್ನು ಮೋದಿ ಹೊಂದಿದ್ದಾರೆ. ಕೇವಲ ಧರ್ಮ ರಕ್ಷಣೆಯಲ್ಲಿ ಮಾತ್ರವೇ ನಂಬಿಕೆ ಹೊಂದಿರದೇ, ನ್ಯಾಯಯುತ ಆಡಳಿತದ ಮೂಲಕ ದೇಶವನ್ನು ಮುನ್ನಡೆಸುವ ದೂರದೃಷ್ಟಿಯನ್ನು ಅವರು ಹೊಂದಿದ್ದಾರೆ’ ಎಂದು ಶ್ರೀಗಳು ಹೇಳಿದ್ದರು.
ಈ ಕುರಿತ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸಚಿವ ಅಶ್ವತ್ಥ ನಾರಾಯಣ, ‘ನಾಡಪ್ರಭು ಕೆಂಪೇಗೌಡರು ಮತ್ತು ಪ್ರಧಾನಿ ಮೋದಿ ಅವರ ನಡುವೆ ಅನೇಕ ಸಾಮ್ಯತೆಗಳಿವೆ. ಇಬ್ಬರೂ ದಾರ್ಶನಿಕರು ಮತ್ತು ಅನುಷ್ಠಾನ ಕಾರ್ಯದಲ್ಲಿ ಮೇರು ವ್ಯಕ್ತಿತ್ವಗಳು. ರೂಪಾಂತರ, ಸುಧಾರಣೆ ಮತ್ತು ನಂಬುಗೆಗಳಲ್ಲಿ ಇಬ್ಬರೂ ದೃಢವಾಗಿ ವಿಶ್ವಾಸವಿಟ್ಟವರಾಗಿದ್ದಾರೆ. ಇವರು ನಿಜವಾದ ಧರ್ಮಕರ್ಮಾಧಿಪತಿಗಳು’ ಎಂದು ಹೇಳಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.