ಧಾರವಾಡ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ದಶಕದ ಹಿಂದೆ ನಡೆದಿದ್ದ ಜಾತಿ ಸಂಘರ್ಷ, ಹಲ್ಲೆ, ಹಿಂಸಾಚಾರ ಪ್ರಕರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಶಿಕ್ಷೆ ವಿಧಿಸಿದ್ದ 101 ಅಪರಾಧಿಗಳಲ್ಲಿ 99 ಮಂದಿಗೆ ಹೈಕೋರ್ಟ್ ಧಾರವಾಡ ಪೀಠ ಜಾಮೀನು ನೀಡಿದೆ.
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಒಟ್ಟು 101 ಮಂದಿಗೆ (98 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ ಐದು ವರ್ಷ ಜೈಲು) ಶಿಕ್ಷೆ ವಿಧಿಸಿತ್ತು. ಪ್ರಕರಣದ ಎ–1 ಅಪರಾಧಿ ಮಂಜುನಾಥ ಜಾಮೀನು ಕೋರಿ ಅರ್ಜಿ ಸಲ್ಲಿಸಿಲ್ಲ. ಮತ್ತೊಬ್ಬ ಅಪರಾಧಿ ರಾಮಣ್ಣ ಭೋವಿ ಶಿಕ್ಷೆಯ ಆದೇಶ ಪ್ರಕಟವಾದ ನಂತರ ಮೃತಪಟ್ಟಿದ್ದರು.
ವಕೀಲ ಆನಂದ ಕೊಳ್ಳಿ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿಭಾಗೀಯ ಪೀಠವು ಹಲವಾರು ವಿಷಯಗಳನ್ನು (ದೂರು ದಾಖಲು ವಿಳಂಬ, ಚಹರೆ ಪತ್ತೆ ಪರೇಡ್, ಜಾಮೀನು ಷರತ್ತು ಪಾಲನೆ...) ಪರಿಗಣಿಸಿ ಜಾಮೀನು ನೀಡಿದೆ. ಜಾಮೀನಿಗೆ ಒಬ್ಬರ ಭದ್ರತೆ ಮತ್ತು ₹ 50 ಸಾವಿರ ಬಾಂಡ್ ನೀಡಬೇಕು ಎಂದು ಷರತ್ತು ವಿಧಿಸಿದೆ’ ಎಂದು ತಿಳಿಸಿದರು.
‘ಒಟ್ಟು ಎಂಟು ವಕೀಲರು ವಕಾಲತ್ತು ಹಾಕಿದ್ದೇವೆ. ಮಂಜುನಾಥ (ಎ1 ಅಪರಾಧಿ) ಅವರಿಗೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.
ದಶಕದ (2014ರ ಆಗಸ್ಟ್ 28) ಹಿಂದೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ನಡೆದ ದಲಿತರು ಹಾಗೂ ಸವರ್ಣೀಯರ ನಡುವಿನ ಜಾತಿ ಸಂಘರ್ಷ, ಹಲ್ಲೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 101 ಜನ ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 5,000 ದಂಡ, ಮೂವರಿಗೆ ಐದು ವರ್ಷ ಜೈಲು ಹಾಗೂ ತಲಾ ₹ 2,000 ದಂಡ ವಿಧಿಸಿ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ಕೋರ್ಟ್ ಆದೇಶ ನೀಡಿತ್ತು. ಮೂವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರಿಂದ ಜಾತಿನಿಂದನೆ ಕಾಯ್ದೆ ಅನ್ವಯವಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.