ADVERTISEMENT

ಮರಕುಂಬಿ ಗ್ರಾಮದಲ್ಲಿ ನೀರವ ಮೌನ: ಸ್ಥಬ್ಧವಾದ ಗ್ರಾಮ, ಪೊಲೀಸ್‌ ಕಣ್ಗಾವಲು

ನ್ಯಾಯಾಲಯದ ಆದೇಶದ ಬಳಿಕ ಸ್ಥಬ್ಧವಾದ ಗ್ರಾಮ, ಪೊಲೀಸ್‌ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:24 IST
Last Updated 26 ಅಕ್ಟೋಬರ್ 2024, 0:24 IST
   

ಕೊಪ್ಪಳ: ಒಂದೇ ಕುಟುಂಬದವರು, ಸಂಬಂಧಿಕರು ಅಕ್ಕಪಕ್ಕದಲ್ಲಿದ್ದರೂ ಮಾತನಾಡಲಾಗದಷ್ಟು ಸಂಕಟ, ನೋವು ಅವರಲ್ಲಿ ಮನೆ ಮಾಡಿತ್ತು. ಪರಸ್ಪರ ಮುಖ ನೋಡಿಕೊಂಡರೂ ಮಾತಿಗಿಂತ ಮೌನದ ಸಂಭಾಷಣೆಯೇ ಹೆಚ್ಚಿತ್ತು. ಊರಿನಲ್ಲಿ ಸ್ಮಶಾನ ಮೌನ, ಎಲ್ಲಿ ನೋಡಿದರೂ ಪೊಲೀಸರ ಕಣ್ಗಾವಲು.

ಇದು ಗಂಗಾವತಿ ತಾಲ್ಲೂಕು ಮರಕುಂಬಿ ಗ್ರಾಮದಲ್ಲಿ ಶುಕ್ರವಾರ ಕಂಡುಬಂದ ಚಿತ್ರಣ. ದಶಕದ ಹಿಂದೆ ದಲಿತರು ಹಾಗೂ ಸವರ್ಣೀಯರ ನಡುವೆ ಗ್ರಾಮದಲ್ಲಿ ನಡೆದ ಜಾತಿಸಂಘರ್ಷ, ದೌರ್ಜನ್ಯ ಸೇರಿದಂತೆ ಹಲವು ಘಟನೆಗಳ ಚಿತ್ರಾವಳಿಗಳು ಅವರಲ್ಲಿ ಮತ್ತೆ ಮತ್ತೆ ಕಣ್ಣ ಮುಂದೆ ಬರುತ್ತಿದ್ದವು.

ಗಂಗಾವತಿ ಶಿವ ಸಿನಿಮಾ ಮಂದಿರದಲ್ಲಿ ಆರಂಭವಾದ ಸಂಘರ್ಷ ಹಂತಹಂತವಾಗಿ ನಾನಾ ರೂಪಗಳನ್ನು ಪಡೆದುಕೊಂಡಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯವು ಗುರುವಾರ ಒಟ್ಟು 101 ಜನ ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮೂವರಿಗೆ ಐದು ವರ್ಷ ಶಿಕ್ಷೆ ನೀಡಿ ಆದೇಶ ನೀಡಿದೆ.

ADVERTISEMENT

ನ್ಯಾಯಾಲಯದ ಈ ಆದೇಶದ ಬಳಿಕ ಅಪರಾಧಿಗಳ ಕುಟುಂಬದವರು ಮೌನಕ್ಕೆ ಜಾರಿದ್ದಾರೆ. ಇಷ್ಟು ದಿನ ನಮ್ಮ ಜೊತೆ ಇದ್ದವರು ಈಗ ಜೈಲು ಪಾಲಾಗಿದ್ದರಲ್ಲ ಎಂದು ದುಃಖ ವ್ಯಕ್ತಪಡಿಸುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು. ಮುನ್ನೆಚ್ಚೆರಿಕಾ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಗ್ರಾಮದ ರಸ್ತೆಗಳು ಖಾಲಿ ಖಾಲಿ. ಅಲ್ಲಲ್ಲಿ ಕಾಣುತ್ತಿದ್ದ ಕೆಲವರು ನಡುವೆ ವಿಷಾದ, ನೋವು ಮನೆ ಮಾಡಿತ್ತು.

ತಮ್ಮ ಕುಟುಂಬದವರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಗುರುವಾರ ನ್ಯಾಯಾಲಯದ ಆವರಣದಲ್ಲಿ ಕಾದು ಕುಳಿತಿದ್ದರೂ ಅವಕಾಶ ಲಭಿಸಲಿಲ್ಲ. ಬಸ್‌ನಲ್ಲಿ ಹಾಗೂ ಪೊಲೀಸ್‌ ಜೀಪಿನಲ್ಲಿ ಹೋಗುವಾಗ ತಮ್ಮವರು ಕಾಣುತ್ತಾರೆನೊ ಎಂದು ಕಣ್ಣೀರು ಹಾಕುತ್ತಲೇ ಕೈ ಬೀಸುತ್ತಿದ್ದ ಚಿತ್ರಣ ಕಂಡುಬಂದಿತ್ತು.

ಕಟ್ಟೆಯೊಡೆದ ದುಃಖ: ಒಟ್ಟು 101 ಜನ ಅಪರಾಧಿಗಳ ಪೈಕಿ ಒಬ್ಬರು ಶುಕ್ರವಾರ ಬೆಳಿಗ್ಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ರಾಮಣ್ಣ ಲಕ್ಷ್ಮಣ ಭೋವಿ (40) ಮೃತಪಟ್ಟ ವಿಷಯ ಪತ್ನಿ ಕಾವೇರಿಗೆ ತಿಳಿಯುತ್ತಿದ್ದಂತೆ ಅವರ ದುಃಖದ ಕಟ್ಟೆಯೊಡೆಯಿತು.

ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಕ್ಕಿಬಿಕ್ಕಿ ಅತ್ತ ಅವರನ್ನು ಸಂಬಂಧಿಕರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಶವಾಗಾರದ ಬಳಿಯೂ ಕಾವೇರಿ ಮೃತ ಗಂಡನನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದ ಚಿತ್ರಣ ಸುತ್ತಲಿದ್ದವರಲ್ಲಿಯೂ ಮನಕುಲುಕುವಂತೆ ಮಾಡಿತು. ಸಂಜೆ ವೇಳೆಗೆ ಮರಕುಂಬಿ ಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋದಾಗ ಅವರ ಕುಟುಂಬದವರು ಹಾಗೂ ನೆರೆಯವರ ಕಣ್ಣೀರಿನ ಕಟ್ಟೆಯೊಡೆಯಿತು. ಒಂದೆಡೆ ಆಂಬುಲೆನ್ಸ್‌ ಸದ್ದು ಮಾರ್ದನಿಸುತ್ತಿದ್ದರೆ ಇನ್ನೊಂದೆಡೆ ನೋವು ವ್ಯಾಪಕವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.