ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸದಸ್ಯ ಸ್ಥಾನಕ್ಕೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಚಿಕ್ಕಬಳ್ಳಾಪುರದ ಪಟ್ರೇನಹಳ್ಳಿ ನಿವಾಸಿ ಆಂಜನೇಯ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಎಸ್‌ಪಿಎಸ್‌ಬಿ ಮುಖ್ಯಸ್ಥ ಹಾಗೂ ಸದಸ್ಯರ ನೇಮಕ ಸಂಬಂಧ ಸರ್ಕಾರ ಮಾರ್ಗಸೂಚಿ ರೂಪಿಸಿತ್ತು. ಈ ಮಾರ್ಗಸೂಚಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಸದಸ್ಯ ಮತ್ತು ಅಧ್ಯಕ್ಷರ ನೇಮಕ ಮಾಡುವಾಗ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಸರ್ಕಾರಕ್ಕೆ 2020ರ ಅ.8ರಂದು ಮಧ್ಯಂತರ ಆದೇಶ ನೀಡಿದೆ.
ಅದರಂತೆ ಸದಸ್ಯರನ್ನು ನೇಮಕ ಮಾಡುವಾಗ ನ್ಯಾಯಾಲಯದ ಅನುಮತಿ ಪಡೆಯಬೇಕಿತ್ತು. ಆದರೆ, ಸರ್ಕಾರ ಯಾವುದೇ ಅನುಮತಿ ಪಡೆಯದೆಯೇ ಮರಿಸ್ವಾಮಿ ಅವರನ್ನು ನೇಮಕ ಮಾಡಿದೆ ಎಂದು ಅರ್ಜಿದಾರರು ದೂರಿದ್ದಾರೆ. ಸದಸ್ಯ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಮರಿಸ್ವಾಮಿ ಅವರಿಗೆ ನಿರ್ಬಂಧ ಹೇರಬೇಕು ಎಂದೂ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.