ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಭಿವೃದ್ಧಿಪಡಿಸಿದ ಕೈಗಾರಿಕಾ ಬಡಾವಣೆಗಳಲ್ಲಿ ಬ್ರಿಗೇಡ್ ಕಂಪನಿಗೆ ಜಮೀನು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮತ್ತು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ನಡುವೆ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಜಟಾಪಟಿಗೆ ಕಾರಣವಾಯಿತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಅರ್ಧ ಗಂಟೆ ಕಾಲಾವಧಿಯ ಚರ್ಚೆಯಲ್ಲಿ ಮಾತನಾಡಿದ ಮರಿತಿಬ್ಬೇಗೌಡ, ‘ಬ್ರಿಗೇಡ್ ಕಂಪನಿಗೆ 2012ರಲ್ಲಿ 25 ಎಕರೆ ಜಮೀನು ನೀಡಲಾಗಿತ್ತು. 2013ರಲ್ಲಿ 5 ಎಕರೆ ನೀಡಲಾಗಿದೆ. ಬಳಿಕ 74 ಎಕರೆ 21 ಗುಂಟೆ ಜಮೀನು ನೀಡಲಾಗಿದೆ. ನಿಗದಿತ ಅವಧಿಯೊಳಗೆ ಕರಾರು ಮಾಡಿಕೊಳ್ಳದೇ ಇದ್ದರೂ ಕಾನೂನು ಉಲ್ಲಂಘಿಸಿ ಜಮೀನು ಪರಭಾರೆ ಮಾಡಲಾಗಿದೆ’ ಎಂದು ಆರೋಪಿಸಿದರು.
ಕಾರ್ಮಿಕರಿಗೆ ಫ್ಲ್ಯಾಟ್ ನಿರ್ಮಿಸುವುದಾಗಿ ಹೇಳಿ ಜಮೀನು ಪಡೆದ ಕಂಪನಿ, ಅಲ್ಲಿ ಐಷಾರಾಮಿ ಮನೆಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದೆ. ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನನ್ನು ಕಂಪನಿ ಅಕ್ರಮವಾಗಿ ಪಡೆದುಕೊಂಡು ದುರ್ಬಳಕೆ ಮಾಡಿ
ಕೊಳ್ಳುತ್ತಿದೆ ಎಂದು ದೂರಿದರು.
ಉತ್ತರ ನೀಡಿದ ನಿರಾಣಿ, ‘ಬ್ರಿಗೇಡ್ ಕಂಪನಿ ಕಾನೂನಿನ ಪ್ರಕಾರವೇ ಜಮೀನು ಪಡೆದುಕೊಂಡಿದೆ. ಯಾವುದೇ ಅಕ್ರಮವೂ ಆಗಿಲ್ಲ. ಕಂಪನಿಯು ಜಮೀನುಗಳನ್ನು ನಿಗದಿತ ಉದ್ದೇಶಕ್ಕೆ ಬಳಸಿಕೊಂಡಿದೆ’ ಎಂದು ಸಮರ್ಥಿಸಿಕೊಂಡರು.
ಆರೋಪದ ಕುರಿತು ತನಿಖೆ ನಡೆಸುವಂತೆ ಮರಿತಿಬ್ಬೇಗೌಡ ಪಟ್ಟು ಹಿಡಿದರು. ಸದನ ಸಮಿತಿ ರಚಿಸುವಂತೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಸಲಹೆ ನೀಡಿದರು. ಆದರೆ, ನಿರಾಣಿ ಒಪ್ಪಲಿಲ್ಲ. ಗದ್ದಲ ಹೆಚ್ಚಾದಾಗ ಸಭಾಪತಿ ಬಸವರಾಜ ಹೊರಟ್ಟಿ ಕಲಾಪ ಮುಂದೂಡಿದರು.
ಬಳಿಕ ಮರಿತಿಬ್ಬೇಗೌಡ ಅವರಿಗೆ ಸಮಜಾಯಿಷಿ ನೀಡಲು ನಿರಾಣಿ ಮುಂದಾದರು. ಏಕವಚನದಲ್ಲೇ ರೇಗಿದ ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದರು. ನಿರಾಣಿ ಕೂಡ ಏಕವಚನದಲ್ಲೇ ಹರಿಹಾಯ್ದರು. ಬಿಜೆಪಿ ಸದಸ್ಯರೂ ಮರಿತಿಬ್ಬೇಗೌಡರ ವಿರುದ್ಧ
ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.