ADVERTISEMENT

ವಿವಾಹ ನೋಂದಣಿ | ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ವಕ್ಫ್‌ ಅಧಿಕಾರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 15:37 IST
Last Updated 16 ಅಕ್ಟೋಬರ್ 2024, 15:37 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ಮುಸ್ಲಿಂ ಸಮುದಾಯದ ವಿವಾಹಿತ ದಂಪತಿಗಳಿಗೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಅಧಿಕಾರವನ್ನು ವಕ್ಫ್‌ ಮಂಡಳಿಗೆ ನೀಡಿರುವುದು ಕಾನೂನು ಬಾಹಿರ’ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ, ‘ದಿ ಹೆಲ್ಪಿಂಗ್ ಸಿಟಿಜನ್ ಆ್ಯಂಡ್ ಪೀಪಲ್ಸ್‌ ಕೋರ್ಟ್’ ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಎ.ಆಲಂ ಪಾಷಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ADVERTISEMENT

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ವಕ್ಫ್‌ ಇಲಾಖೆಯ ಅಧೀನ ಕಾರ್ಯದರ್ಶಿ ಹಾಗೂ ರಾಜ್ಯ ವಕ್ಫ್‌ ಮಂಡಳಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ. ಅಂತೆಯೇ, ‘ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿ’ ಎಂದು ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿದೆ.

ಅರ್ಜಿಯಲ್ಲಿ ಏನಿದೆ?:

‘ಮುಸ್ಲಿಮರಿಗೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಸಂಬಂಧ 2009ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ 2011ರಲ್ಲಿ ರದ್ದುಪಡಿಸಿದೆ. ಇದಾದ ಬಳಿಕ ಸರ್ಕಾರ ಪರಿಷ್ಕೃತ ಆದೇಶಗಳನ್ನು ಹೊರಡಿಸಿದೆ. ಈಗಾಗಲೇ ಉಪ ನೋಂದಣಾಧಿಕಾರಿಗಳ ಬಳಿ ವಿವಾಹ ನೋಂದಣಿಗೆ ಅವಕಾಶವಿದೆ. ಅಲ್ಲದೇ, ಸ್ಥಳೀಯ ಖಾಜಿಗಳ ಬಳಿಯೂ ವಿವಾಹ ದಾಖಲೆ ಇರಲಿದೆ. ಆದಾಗ್ಯೂ, ವಿವಾಹ ನೋಂದಣಿ ಮತ್ತು ವಿವಾಹ ಪ್ರಮಾಣಪತ್ರ ನೀಡುವ ಅಧಿಕಾರವನ್ನು ವಕ್ಫ್‌ ಮಂಡಳಿಗೆ ನೀಡುವ ಮೂಲಕ ಮೂರನೇ ವ್ಯವಸ್ಥೆಯೊಂದನ್ನು ಹುಟ್ಟು ಹಾಕಲಾಗಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

‘ಮುಸ್ಲಿಂ ಸಮುದಾಯದ ವಿವಾಹಿತ ದಂಪತಿಗೆ ವಿವಾಹ ನೋಂದಣಿ ಮತ್ತು ವಿವಾಹ ಪ್ರಮಾಣಪತ್ರ ನೀಡುವ ಅಧಿಕಾರವನ್ನು ರಾಜ್ಯ ವಕ್ಫ್‌ ಮಂಡಳಿಗೆ ನೀಡಿ ರಾಜ್ಯ ಸರ್ಕಾರ 2023ರ ಆಗಸ್ಟ್‌ 30ರಂದು ಹೊರಡಿಸಿರುವ ಆದೇಶ ವಕ್ಫ್‌ ಕಾಯ್ದೆ-1995 ಹಾಗೂ ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ. ಆದ್ದರಿಂದ, ಈ ಆದೇಶ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.