ಬೆಂಗಳೂರು/ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲುವಿವಿಧ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ವಿಭಿನ್ನ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು, ಅದರ ಭಾಗವಾಗಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಗುರುವಾರ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಬಿಜೆಪಿ ವಿರೋಧಿ ಶಕ್ತಿಗಳು ಒಂದುಗೂಡಿ ಯಾವ ಕಾರ್ಯತಂತ್ರಗಳನ್ನು ಅನುಸರಿಸಬೇಕು ಎಂಬ ಬಗ್ಗೆ ದೇವೇಗೌಡ, ಕುಮಾರಸ್ವಾಮಿ ಮತ್ತು ಚಂದ್ರಬಾಬು ನಾಯ್ಡು ಬಗ್ಗೆ ಸುಮಾರು 45 ನಿಮಿಷ ಚರ್ಚಿಸಿದರು. ಎನ್‌ಡಿಎ ವಿರೋಧಿ ಪಕ್ಷಗಳನ್ನು ಒಂದೇ ಸೂರಿನಡಿ ತರುವ ಜೊತೆಗೆ ಜನವರಿಯಿಂದಲೇ ಕೇಂದ್ರ ಸರ್ಕಾರದ ವಿರುದ್ಧ ಚುನಾವಣಾ ರಣಕಹಳೆ ಮೊಳಗಿಸಲು ತೀರ್ಮಾನಿಸಿದರು.
ದೇವೇಗೌಡ–ಕುಮಾರಸ್ವಾಮಿ ಅವರ ಜೊತೆಗಿನ ಮಾತುಕತೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಚಂದ್ರಬಾಬು ನಾಯ್ಡು, ’ದೇಶ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದೇನೆ’ ಎಂದರು.
‘ದೇಶವನ್ನು ಹಾಳುಗೆಡವಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದೇ ನಮ್ಮ ಗುರಿ.ಕರ್ನಾಟಕದ ಉಪ ಚುನಾವಣೆ ಫಲಿತಾಂಶ ದೇಶದ ಜನತೆಯ ಸದ್ಯದ ಒಲವು ಯಾವ ದಿಕ್ಕಿನತ್ತ ಸಾಗಿದೆ ಎಂಬುದರ ಸಂಕೇತ’ ಎಂದು ವ್ಯಾಖ್ಯಾನಿಸಿದರು.
‘ಬಿಜೆಪಿ ವಿರುದ್ಧದ ಶಕ್ತಿಗಳನ್ನು ಬಲಪಡಿಸಲು ಬಿಎಸ್ಪಿಯ ಮಾಯಾವತಿ, ಎಸ್‌ಪಿಯ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಯಾದವ್, ಟಿಎಂಸಿಯ ಮಮತಾ ಬ್ಯಾನರ್ಜಿ ಜತೆಯೂ ಮಾತುಕತೆ ನಡೆಸುತ್ತೇನೆ. ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರನ್ನೂ ಶುಕ್ರವಾರ (ನ. 9) ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ.ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಜನವರಿಯಲ್ಲಿ ಕೇಂದ್ರದ ವಿರುದ್ಧ ರೈತರ ಬೃಹತ್ ರ‍್ಯಾಲಿಗಳನ್ನು ಆಯೋಜಿಸುವ ಉದ್ದೇಶವಿದೆ’ ಎಂದೂ ಅವರು ಹೇಳಿದರು.
‘ಕೇಂದ್ರದ ತನಿಖಾ ಸಂಸ್ಥೆ, ಭಾರತೀಯ ರಿಸರ್ವ್ ಬ್ಯಾಂಕ್, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹೀಗೆ ಹಲವು ಸಾಂವಿಧಾನಿಕ ಸಂಸ್ಥೆಗಳನ್ನು ಮೋದಿ ನಾಶ ಮಾಡಿದ್ದಾರೆ. ಆರ್‌ಬಿಐ ಹಾಳುಗೆಡಹುವ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ರಾಜಕೀಯ ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲುಸಿಬಿಐ ಅನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದೂ ನಾಯ್ಡು ದೂರಿದರು.
‘1996ರಲ್ಲಿ ದೇವೇಗೌಡರು ಪ್ರಧಾನಿ ಆಗಲು ಕಾಂಗ್ರೆಸ್ ನೇತೃತ್ವದ ಜಾತ್ಯತೀತ ಶಕ್ತಿಗಳು ಒಗ್ಗೂಡಿದ್ದವು. ಯುನೈಟೆಡ್ ಫ್ರಂಟ್‌ಗೆ ದೇವೇಗೌಡ ಅಧ್ಯಕ್ಷರಾಗಿದ್ದು, ನಾನು ಸಂಚಾಲಕನಾಗಿದ್ದೆ. ಈಗಲೂ ಅದೇ ರೀತಿ ಒಗ್ಗೂಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.
‘ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬುದು ನಮಗೆ ಮುಖ್ಯವಲ್ಲ. ನರೇಂದ್ರ ಮೋದಿ ದುರಾಡಳಿತದಿಂದ ದೇಶವನ್ನು ಪಾರು ಮಾಡಬೇಕು. ಇದಕ್ಕಾಗಿ ಜಾತ್ಯತೀತ ಪಕ್ಷಗಳು ಒಂದಾಗಬೇಕು. ದೇಶಕ್ಕೆ ಒಳಿತಾಗಬೇಕು. ನಾವೆಲ್ಲರೂ ಒಂದಾಗಿ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ’ ಎಂದರು.
**
ಮೋದಿ ವಿರುದ್ಧ ಜಂಟಿ ಕಾರ್ಯತಂತ್ರ
ನವದೆಹಲಿ: ಬಿಜೆಪಿಯನ್ನು ಮಣಿಸಲು ಯಾವೆಲ್ಲ ಕಾರ್ಯತಂತ್ರಗಳನ್ನು ಅನುಸರಿಸಬೇಕೋ ಅವೆಲ್ಲವನ್ನೂ ಕಾರ್ಯರೂಪಕ್ಕೆ ತರಲು ವಿರೋಧ ಪಕ್ಷಗಳು ಯೋಚಿಸುತ್ತಿವೆ. ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರಿಗೆ ಯಾವುದೇ ರೀತಿಯಲ್ಲಿ ಇರಿಸುಮುರುಸಾಗದಂತೆ ನೋಡಿಕೊಳ್ಳುವುದು ಈ ಕಾರ್ಯತಂತ್ರದ ಬಹುಮುಖ್ಯ ಭಾಗ.
ಹಿರಿಯ ಮುಖಂಡ ಶರದ್ ಯಾದವ್ ಆರಂಭಿಸಿರುವ ‘ಸಂಯುಕ್ತ ಸಂಸ್ಕೃತಿ ಉಳಿಸಿ’ ಅಭಿಯಾನವನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ; ರಫೇಲ್ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾಗುವ ಅಕ್ರಮಗಳ ಬಗ್ಗೆ ಜಂಟಿ ಪ್ರಹಾರ ಮತ್ತು ಕೇಂದ್ರ–ರಾಜ್ಯಗಳ ಸಂಬಂಧದ ಬಗ್ಗೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸುವುದು ಇತರ ಕಾರ್ಯತಂತ್ರಗಳು.
ಈ ಎಲ್ಲ ಪ್ರಯತ್ನಗಳು ಕಾಂಗ್ರೆಸ್ ಕೇಂದ್ರಿತ ಎಂಬ ಭಾವನೆ ಪ್ರಾದೇಶಿಕ ಪಕ್ಷಗಳ ಮುಖಂಡರಲ್ಲಿ ಉಂಟಾಗದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ. ರಾಜ್ಯಗಳಲ್ಲಿ ಪ್ರತಿಸ್ಪರ್ಧಿಗಳಾಗಿರುವ ಪಕ್ಷಗಳು ರಾಷ್ಟ್ರ ಮಟ್ಟದಲ್ಲಿ ವೇದಿಕೆ ಹಂಚಿಕೊಳ್ಳಲು ವ್ಯವಸ್ಥೆ ಮಾಡುವುದು ಮತ್ತು ಯಾವುದೇ ಪಕ್ಷವು ಈ ಕಾರ್ಯತಂತ್ರವನ್ನು ಅಪಹರಿಸದಂತೆ ನೋಡಿಕೊಳ್ಳುವುದು ಈಗಿನ ಲೆಕ್ಕಾಚಾರವಾಗಿದೆ.
ಮುಖ್ಯಮಂತ್ರಿಗಳ ಸಭೆಗೆ ಕೂಡ ಕಾಂಗ್ರೆಸ್ ಪಕ್ಷ ನೇತೃತ್ವ ನೀಡುವುದಿಲ್ಲ. ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಸಭೆಯ ಸಿದ್ಧತೆಗಳಿಗೆ ಚಾಲನೆ ನೀಡಲಿದ್ದಾರೆ. ಎಎಪಿ ಮುಂದಾಳುತ್ವದಲ್ಲಿ ಈ ಸಭೆ ದೆಹಲಿಯಲ್ಲಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
**
ಕರ್ನಾಟಕದಲ್ಲಿ ಇರುವಂತಹ ಮೈತ್ರಿ ಪ್ರಯೋಜನಕಾರಿ. ಇತರ ರಾಜ್ಯಗಳಲ್ಲಿಯೂ ಇಂತಹ ಮೈತ್ರಿಕೂಟಗಳು ರಚನೆ ಆಗಬೇಕು
-ಪಿ. ಚಿದಂಬರಂ, ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.