ಬೆಂಗಳೂರು: ‘ಆಧುನಿಕ ಕನ್ನಡ ಸಾಹಿತ್ಯದ ಕುರಿತು ಉಲ್ಲೇಖಿಸುವಾಗ ಮಾಸ್ತಿ ಅವರನ್ನು ‘ಕನ್ನಡದ ಆಸ್ತಿ’ ಎಂದು ಕರೆಯಲಾಗುತ್ತದೆ. ಆದರೆ, ಆಸ್ತಿ ಎನ್ನುವುದು ಅಷ್ಟು ಸೂಕ್ತ ಪದವಲ್ಲ. ಅವರನ್ನು ಆಧುನಿಕ ಸಣ್ಣ ಕಥೆಗಳ ಹೆತ್ತಜ್ಜ ಅಥವಾ ಮುತ್ತಜ್ಜ ಎನ್ನಬಹುದು’ ಎಂದು ಮಾಸ್ತಿ ಪ್ರಶಸ್ತಿ ಸ್ವೀಕರಿಸಿದ ಮೊಗಳ್ಳಿ ಗಣೇಶ್ ಅಭಿಪ್ರಾಯಪಟ್ಟರು.
‘ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್’ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಮಾಸ್ತಿ ಪ್ರಶಸ್ತಿ, ಮಾಸ್ತಿ ಕಾದಂಬರಿ–ಕಥಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಡದ ಬಹುಪಾಲು ಕಥೆಗಾರರು ಮಾಸ್ತಿ ಅವರ ಕಥಾಲೋಕದ ಗರ್ಭದಿಂದಲೇ ಬಂದವರು. ಆದ್ದರಿಂದಲೇ ಮಾಸ್ತಿ ಅವರನ್ನು ಹೆತ್ತಜ್ಜ ಎನ್ನುವುದೇ ಸೂಕ್ತ’ ಎಂದು ವಿಶ್ಲೇಷಿಸಿದರು.
ಕಥೆಗಾರ ವಸುಧೇಂದ್ರ, ‘ಮಾಸ್ತಿ ಕನ್ನಡದ ಆಸ್ತಿ ಎನ್ನುವ ಮಾತಿನಲ್ಲಿ ಆಸ್ತಿ ಅಷ್ಟೇನು ಸೂಕ್ತ ಪದವಂತೂ ಅಲ್ಲ. ಆಸ್ತಿ ಕರಗಿ ಹೋಗುತ್ತೆ. ಆದ್ದರಿಂದ ಅವರನ್ನು ಕನ್ನಡ ಕಥಾಲೋಕದ ಅಸ್ತಿಭಾರ ಎನ್ನಬಹುದು’ ಎಂದು ಪ್ರತಿಕ್ರಿಯಿಸಿದರು.
ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಕೆ. ಮರುಳಸಿದ್ದಪ್ಪ, ‘ಮಾಸ್ತಿ ಅವರು ನಾಮ ಹಾಕಿಕೊಳ್ಳುತ್ತಿದ್ದರು. ಅವರೊಳಗೆ ಧಾರ್ಮಿಕ ಡಾಂಭಿಕತೆ ಇರಲಿಲ್ಲ. ಆದರೆ, ಇಂದು ನಾವೆಲ್ಲ ಹಣೆಗೆ ನಾಮ, ಪಟ್ಟೆ ಬಳಿದುಕೊಳ್ಳುವುದಿಲ್ಲ. ಆದರೂ, ನಮ್ಮ ಎದೆಯಲ್ಲಿ ವಿಷವಿದೆ’ ಎಂದು ಅವರು ಹೇಳಿದರು.
‘ಸಾಮಾಜಿಕ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ವಿಷಯ ಇದ್ದರೂ ಮಾಸ್ತಿ ನಿರ್ಭಿಡೆಯಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ಕಾರಣಕ್ಕಾಗಿಯೇ ನನ್ನ ಅಭಿಪ್ರಾಯದಲ್ಲಿ ಮಾಸ್ತಿ ಹಾಗೂ ಡಿ.ವಿ.ಜಿ ಅವರಿಬ್ಬರೂ ಮೊದಲ ಪಬ್ಲಿಕ್ ಇಂಟಲೆಕ್ಚುಯಲ್ಸ್’ ಎಂದು ಬಣ್ಣಿಸಿದರು.
ಸವಿತಾ ನಾಗಭೂಷಣ, ಈಶ್ವರಚಂದ್ರ, ಕೆ. ಮರುಳಸಿದ್ದಪ್ಪ, ಮೊಗಳ್ಳಿ ಗಣೇಶ್ ಅವರಿಗೆ ಸಂಶೋಧಕ ಹಂಪ ನಾಗರಾಜಯ್ಯ ಮಾಸ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಗೆ ಆಯ್ಕೆ ಆಗಿದ್ದ ಬೊಳುವಾರು ಮಹಮ್ಮದ್ ಕುಂಞಿ ಅವರು ಗೈರಾಗಿದ್ದರು.
ಮಾಸ್ತಿ ಕಾದಂಬರಿ – ಕಥಾ ಪುರಸ್ಕಾರ ವಿಭಾಗದಲ್ಲಿ, ‘ತಾರಾಬಾಯಿಯ ಪತ್ರ’ ಕಾದಂಬರಿಗಾಗಿ ಎಂ.ಆರ್. ದತ್ತಾತ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಥಾ ವಿಭಾಗದಲ್ಲಿ ‘ಪ್ರತಿಫಲನ’ ಕಥಾಸಂಕಲನಕ್ಕೆ ಎ.ಎನ್. ಪ್ರಸನ್ನ ಹಾಗೂ ‘ಅವತಾರ’ ಕೃತಿಗಾಗಿ ಎಸ್. ಶೇಷಾದ್ರಿ ಕಿನಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳನ್ನು ಪ್ರಕಟಿಸಿದ ‘ಛಂದ ಪುಸ್ತಕ’, ಗೀತಾಂಜಲಿ ಮತ್ತು ಪಾಂಚಜನ್ಯ ಪ್ರಕಾಶನ ಸಂಸ್ಥೆಗಳನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.