ADVERTISEMENT

ರಾಜ್ಯದಲ್ಲಿ ನಿಲ್ಲದ ತಾಯಂದಿರ ಮರಣ

ನಗರದಲ್ಲಿ ಆರು ವರ್ಷಗಳಲ್ಲಿ 304 ಪ್ರಕರಣ l ಎಂಟು ತಿಂಗಳಲ್ಲಿ 60 ತಾಯಂದಿರ ಸಾವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 22:30 IST
Last Updated 21 ಫೆಬ್ರುವರಿ 2023, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ, ಆರೋಗ್ಯ ಜಾಗೃತಿ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಆರು ವರ್ಷಗಳಲ್ಲಿ 304 ತಾಯಂದಿರು ಮೃತಪಟ್ಟಿದ್ದಾರೆ.

ಹೆರಿಗೆ ವೇಳೆ ತಾಯಂದಿರ ಮರಣ ತಡೆಯಲು ಆರೋಗ್ಯ ಇಲಾಖೆಯು ‘ಲಕ್ಷ್ಯ’ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದೇ ರೀತಿ, ತಾಯಂದಿರಿಗಾಗಿಯೇ ಮೀಸಲಾದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಇಲ್ಲಿವೆ. ಆದರೂ ತಾಯಂದಿರ ಮರಣ ಪ್ರಕರಣ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಈ ಆರ್ಥಿಕ ವರ್ಷದ ಮೊದಲ ಎಂಟು ತಿಂಗಳ ಅವಧಿಯಲ್ಲಿ 389 ಮರಣ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಅವುಗಳಲ್ಲಿ 60 ತಾಯಂದಿರ ಮರಣ ಬೆಂಗಳೂರಿನಲ್ಲಿಯೇ ದೃಢಪಟ್ಟಿದೆ. ಇಷ್ಟು ಸಂಖ್ಯೆಯಲ್ಲಿ ಮರಣ ಪ್ರಕರಣ, ರಾಜ್ಯದ ಬೇರಾವುದೇ ಜಿಲ್ಲೆಯಲ್ಲಿ ವರದಿಯಾಗಿಲ್ಲ.

2020ರ ಮಾರ್ಚ್ ತಿಂಗಳಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಕೆಲ ಅವಧಿ ಲಾಕ್‌ಡೌನ್ ಘೋಷಿಸಿ, ಜಿಲ್ಲೆಯಿಂದ ಜಿಲ್ಲೆಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ತಾಯಂದಿರಿಗೆ ಪ್ರಸವಪೂರ್ವ ಹಾಗೂ ಪ್ರಸವ ನಂತರದ ಆಸ್ಪತ್ರೆ ಚಿಕಿತ್ಸೆ ಸಮಸ್ಯೆಯಾಗಿತ್ತು. ಹೀಗಾಗಿ, ತಾಯಂದಿರ ಮರಣ ಪ್ರಕರಣಗಳು ಸಮರ್ಪಕವಾಗಿ ವರದಿಯಾಗಿರಲಿಲ್ಲ. ಪರಿಣಾಮ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 2021–22ನೇ ಸಾಲಿನಲ್ಲಿ 9 ತಾಯಂದಿರು ಮಾತ್ರ ನಗರದಲ್ಲಿ ಮೃತಪಟ್ಟಿದ್ದಾರೆ. 2019–20ನೇ ಸಾಲಿನಲ್ಲಿ 82 ತಾಯಂದಿರ ಮರಣ ಪ್ರಕರಣ ವರದಿಯಾಗಿದ್ದವು.

ADVERTISEMENT

ಹಲವು ಕ್ರಮ: ತಾಯಂದಿರ ಮರಣ ತಡೆಗೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆಸ್ಪತ್ರೆಗಳಲ್ಲಿನ ಪ್ರಸವಪೂರ್ವ ಮತ್ತು ಪ್ರಸವ ನಂತರ ಸೇವೆಗಳನ್ನು ಸುಧಾರಿಸಲು ಲಕ್ಷ್ಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಿಗೆ, ಶುಶ್ರೂಷಕರಿಗೆ ಈ ಕಾರ್ಯಕ್ರಮದಡಿ ಕೌಶಲ ಹೆಚ್ಚಿಸಲು ದಕ್ಷತಾ ತರಬೇತಿ ನೀಡಲಾಗುತ್ತಿದೆ.

ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಖಾಸಗಿ ತಜ್ಞ ವೈದ್ಯರ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮವನ್ನೂ
ನಡೆಸಲಾಗುತ್ತಿದೆ. ರಕ್ತಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಉಚಿತವಾಗಿ ಐರನ್ ಸುಕ್ರೋಸ್ ಇಂಜೆಕ್ಷನ್, ಐರನ್ ಫೋಲಿಕ್ ಆ್ಯಸಿಡ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಪೂರೈಕೆ ಮಾಡಲಾಗುತ್ತಿದೆ. ಆದರೂ ತಾಯಂದಿರ ಮರಣ ‍ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ.

‘ರಕ್ತಸ್ರಾವ ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಾಗ ತಕ್ಷಣ ಆಸ್ಪತ್ರೆಗೆ ತೆರಳಿ, ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲಿ ವರದಿಯಾಗುತ್ತಿರುವ ತಾಯಂದಿರ ಮರಣ ಪ್ರಕರಣಗಳಲ್ಲಿ ಹೆಚ್ಚಿನವರು ಹೊರ ಜಿಲ್ಲೆಗಳಿಂದ ಬಂದವರಾಗಿರುತ್ತಾರೆ. ಪರಿಸ್ಥಿತಿ ಕೈ ಮೀರಿದಾಗ ಆಸ್ಪತ್ರೆಗೆ ಬಂದರೆ ವೈದ್ಯರೂ ಅಸಹಾಯಕರಾಗುತ್ತಾರೆ‌. ಗಂಡಾಂತರ ಹೆರಿಗೆ ಪ್ರಕರಣಗಳನ್ನು ಗುರುತಿಸಿ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ವಾಣಿವಿಲಾಸ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ಸಾವಿಗೆ ಪ್ರಮುಖ ಕಾರಣಗಳು:

*ರಕ್ತ ಹಿನತೆ, ರಕ್ತಸ್ರಾವ

*ಅಪೌಷ್ಟಿಕತೆ

*ಬಾಲ್ಯವಿವಾಹ

*ಸಕಾಲದಲ್ಲಿ ಪರೀಕ್ಷೆ ಮಾಡಿಸದಿರುವುದು

*ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕುಂಠಿತ

*ಮುಂಜಾಗ್ರತೆ ಕ್ರಮ ಕೈಗೊಳ್ಳದಿರುವುದು

*ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯ ಕೊರತೆ

ನಗರದಲ್ಲಿ ತಾಯಂದಿರ ಮರಣ ಪ್ರಕರಣ (ವರ್ಷ; ಪ್ರಕರಣಗಳು)

2017–18; 67

2018–19; 47

2019–20; 82

2020–21; 39

2021–22; 09

2022–23 (ಕಳೆದ ವರ್ಷಾಂತ್ಯಕ್ಕೆ); 60

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.