ಬಸವಕಲ್ಯಾಣ (ಬೀದರ್ ಜಿಲ್ಲೆ):‘ಆಭರಣ ಧರಿಸದವರೇ ನಿಜವಾದ ಸ್ವಾಮೀಜಿಗಳು ಎಂಬುದು ನನ್ನ ನಿಲುವು. ಆಭರಣ ಧರಿಸುವವರನ್ನುಏನೆನ್ನಬೇಕು ಎಂಬುದನ್ನು ನೀವೇ ಊಹಿಸಿ' ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.
ಶುಕ್ರವಾರ ಇಲ್ಲಿ ಆಯೋಜಿಸಿದ್ದ ‘ಮತ್ತೆ ಕಲ್ಯಾಣ’ ಅಭಿಯಾನದ ಸಮಾರೋಪದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ, ‘ಕೆಲ ಸ್ವಾಮೀಜಿಗಳು ಚಿನ್ನಾಭರಣ, ಕಿರೀಟ ಧರಿಸುತ್ತಾರೆ. ಸರ್ವಸಂಗ ಪರಿತ್ಯಾಗಿಗಳಾಗಿದ್ದೇವೆ ಎಂದು ಹೇಳಿಕೊಳ್ಳುವ ಅವರಿಗೆ ಇದೆಲ್ಲ ಬೇಕೆ’ ಎಂಬ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
‘ಜಾತಿ ಕಾರಣಕ್ಕಾಗಿ ಅವಮಾನಿತರಾದವರು ಹಾಗೂ ಎಲ್ಲ ರೀತಿಯಿಂದ ಹಿಂದುಳಿದವರ ಅಭಿವೃದ್ಧಿಗಾಗಿ ಸೌಲಭ್ಯ ನೀಡಲು ಸರ್ಕಾರ ದಾಖಲೆಗಳಲ್ಲಿ ಜಾತಿ ನಮೂದಿಸುತ್ತದೆ. ಇದು ತಪ್ಪಲ್ಲ. ಆದರೆ, ರಾಜಕೀಯಕ್ಕಾಗಿ ಜಾತಿಭೇದ ಮಾಡುವುದು ಶುದ್ಧ ತಪ್ಪು’ ಎಂದು ‘ಸರ್ಕಾರ ಜಾತಿ ಕೇಳುತ್ತದಲ್ಲ’ ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ ಅವರು ಉತ್ತರಿಸಿದರು.
‘ವೀರಶೈವ ಮತ್ತು ಲಿಂಗಾಯತರಲ್ಲಿ ಭೇದವೇಕೆ’ ಎಂಬ ಪ್ರಶ್ನೆಗೆ, ಪ್ರತಿಕ್ರಿಯಿಸಿದಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,‘ವೀರಶೈವರು ಬಹುದೇವೋಪಾಸಕರು. ಲಿಂಗಾಯತರು ಏಕದೇವೋಪಾಸಕರು. ವೀರಶೈವರೇ ಬೇರೆ, ಲಿಂಗಾಯತರೇ ಬೇರೆ' ಎಂದರು.
‘ಮತ್ತೆ ಕಲ್ಯಾಣದ ಹೆಸರಲ್ಲಿ ನಾಡು ಸುಧಾರಿಸಲು ಹೊರಟಿದ್ದೀರಿ. ನಿಮ್ಮ ಮಠಗಳಲ್ಲಿ ಹಾಗೂ ನಿಮ್ಮೂರುಗಳಲ್ಲಿ ಜಾತೀಯತೆ ಹೋಗಿದೆಯೇ? ಅಲ್ಲಿ ಬಸವತತ್ವ ಸಂಪೂರ್ಣವಾಗಿ ಆಚರಣೆಗೆ ಬಂದಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ ‘ನಮ್ಮಲ್ಲಿಯೂ ಸಾಕಷ್ಟು ಸುಧಾರಣೆ ಆಗಬೇಕಾಗಿದೆ. ಅದಕ್ಕಾಗಿ ಸರ್ವಪ್ರಯತ್ನ ನಡೆದಿದೆ’ ಎಂದು ಸಮಜಾಯಿಷಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.