ಹುಬ್ಬಳ್ಳಿ: ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಶಾಸಕ ಆನಂದ್‌ಸಿಂಗ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಕಂಪ್ಲಿ ಶಾಸಕ ಗಣೇಶ್‌ರನ್ನು ಪೊಲೀಸರು ಶೀಘ್ರ ಬಂಧಿಸಲಿದ್ದಾರೆ. ಅವರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿರುವುದರಿಂದ ಅವರ ಬಂಧನ ಖಚಿತ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದರು.
ಮಂಗಳವಾರ ಬೆಳಿಗ್ಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅಲ್ಲದೇ, ಗೃಹ ಇಲಾಖೆ ನಿಷ್ಕ್ರಿಯವಾಗಿಯೂ ಇಲ್ಲ. ಸಾಮಾನ್ಯವಾಗಿ ಅವರು ಬಳಸುವ ಮೊಬೈಲ್ ಜಾಡು ಹಿಡಿದು ಪತ್ತೆ ಹಚ್ಚಲಾಗುತ್ತದೆ. ಇದರ ಮುನ್ಸೂಚನೆ ಅರಿತ ಗಣೇಶ ಸಿಮ್ ಕಿತ್ತು ಹಾಕಿ, ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಹೀಗಾಗಿ ಪತ್ತೆ ಕಾರ್ಯ ತಡವಾಗಿದೆ. ಆದರೆ, ಶೀಘ್ರವೇ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ‘ ಎಂದರು.
ಔರಾದಕರ್ ವರದಿ ಜಾರಿ ಖಚಿತ: ಪೊಲೀಸ್ ಸಿಬ್ಬಂದಿಯ ವೇತನ ತಾರತಮ್ಯ ಕುರಿತು ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದಕರ್ ಅವರು ಸಲ್ಲಿಸಿರುವ ವರದಿಯ ಪ್ರಮುಖ ಅಂಶಗಳನ್ನು ಜಾರಿಗೊಳಿಸಲು ಮೈತ್ರಿ ಸರ್ಕಾರ ಬದ್ಧವಾಗಿದೆ. ಬಜೆಟ್ ಅಥವಾ ಪ್ರತ್ಯೇಕವಾಗಿ ವರದಿ ಜಾರಿ ಕುರಿತು ಘೋಷಣೆ ಹೊರಡಿಸಲಾಗುವುದು ಎಂದು ಹೇಳಿದರು.
ಡೆಡ್‌ಲೈನ್ ಎಷ್ಟು: ಮೈತ್ರಿ ಸರ್ಕಾರವನ್ನು ಉರುಳಿಸಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ನಾಯಕರು ಮೇಲಿಂದ ಮೇಲೆ ಡೆಡ್‌ಲೈನ್‌ಗಳನ್ನು ನೀಡುತ್ತಲೇ ಇದ್ದಾರೆ. ಈಗಾಗಲೇ ಮೂರು ಪ್ರಯತ್ನಗಳು ನಡೆದು ವಿಫಲವಾಗಿವೆ. ಈಗ ಮತ್ತೊಂದು ಬಾರಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಭದ್ರವಾಗಿದೆ. 14 ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬುದೆಲ್ಲ ವದಂತಿ. ರಮೇಶ ಜಾರಕಿಹೊಳಿ, ಉಮೇಶ ಜಾಧವ, ನಾಗೇಂದ್ರ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದರು.
ಬಜೆಟ್ ಅಧಿವೇಶನ ಸುಸೂತ್ರವಾಗಿ ನಡೆಯಲಿದ್ದು, ಈ ಬಗ್ಗೆ ಯಾವುದೇ ಅನುಮಾನಗಳು ಇಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.