ADVERTISEMENT

ರಾಜ್ಯದಲ್ಲಿ ₹1,245 ಕೋಟಿ ಹೂಡಿಕೆ: ದಕ್ಷಿಣ ಕೊರಿಯಾದ ವೈಜಿ–1 ಕಂಪನಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:20 IST
Last Updated 3 ಜುಲೈ 2024, 16:20 IST
<div class="paragraphs"><p>ಎಂ.ಬಿ.ಪಾಟೀಲ</p></div>

ಎಂ.ಬಿ.ಪಾಟೀಲ

   

ಬೆಂಗಳೂರು: ಕರ್ನಾಟಕದಲ್ಲಿ ₹1,245 ಕೋಟಿ ಹೂಡಿಕೆ ಮಾಡುವುದಾಗಿ ದಕ್ಷಿಣ ಕೊರಿಯಾದ ಜಾಗತಿಕ ಮಟ್ಟದ ಟೂಲ್ಸ್‌ ತಯಾರಿಕಾ ಕಂಪನಿ ವೈಜಿ–1 ಘೋಷಿಸಿದೆ.

ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ದಕ್ಷಿಣ ಕೊರಿಯಾಕ್ಕೆ ಐದು ದಿನಗಳ ಭೇಟಿ ಕೈಗೊಂಡಿದೆ. ನಿಯೋಗದ ಜತೆಗೆ ಬುಧವಾರ ನಡೆದ ಸಭೆಯ ಸಂದರ್ಭದಲ್ಲಿ ವೈಜಿ–1 ಈ ಘೋಷಣೆ ಮಾಡಿದೆ.

ADVERTISEMENT

‘ಕರ್ನಾಟಕದಲ್ಲಿ ಕೊರಿಯಾ ಭಾಷೆ ಕಲಿಕಾ ಮತ್ತು ತರಬೇತಿ ಕೇಂದ್ರ ಸ್ಥಾಪನೆ, ಇಂಧನ–ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು’ ಎಂದು ಕಂಪನಿಯ ಮುಖ್ಯಸ್ಥ ಹೊ ಕ್ಯೂನ್‌ ಸಾಂಗ್‌ ಅವರು ಹೇಳಿದ್ದಾರೆ.

ಕ್ರಾಫ್ಟನ್‌ ಇಂಕ್‌ ಆಸಕ್ತಿ: ಜಾಗತಿಕ ಮಟ್ಟದ ಗೇಮಿಂಗ್‌ ಕಂಪನಿ ಕ್ರಾಫ್ಟನ್‌ ಇಂಕ್‌ ಸಹ ಮುಂದಿನ 2–3 ವರ್ಷಗಳಲ್ಲಿ ₹1,245 ಕೋಟಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿಸಿದೆ. ಕಂಪನಿಯು ಭಾರತದ ವಿವಿಧ ನವೋದ್ಯಮಗಳಲ್ಲಿ ₹1,162 ಕೋಟಿ ಹೂಡಿಕೆಯನ್ನು ಈಗಾಗಲೇ ಮಾಡಿದೆ. ಇ–ಕ್ರೀಡೆಗಳು ಮತ್ತು ಮೊಬೈಲ್‌ ಫೋನ್‌ ಗೇಮಿಂಗ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮತ್ತು ಭಾರತದ್ದೇ ಗೇಮಿಂಗ್‌ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಕಂಪನಿಯೊಂದಿಗೆ ಚರ್ಚಿಸಲಾಗಿದೆ ಎಂದು ನಿಯೋಗವು ತಿಳಿಸಿದೆ.

ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಮಾರುಕಟ್ಟೆಯ ತ್ವರಿತ ವಿಸ್ತರಣೆ ಮತ್ತು ಆ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಈ ಭೇಟಿಯ ವೇಳೆ ಕೊರಿಯಾದ ಕಂಪನಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ನಿಯೋಗವು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.