ADVERTISEMENT

ಉಪನಗರ ರೈಲು ಯೋಜನೆ ವಿಳಂಬ ಸಲ್ಲ: ಸಚಿವ ಎಂ.ಬಿ.ಪಾಟೀಲ

‘ವಿಳಂಬವಾದರೆ ಗುತ್ತಿಗೆದಾರರಿಂದ ವೆಚ್ಚ ವಸೂಲಿ’

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 16:23 IST
Last Updated 27 ಆಗಸ್ಟ್ 2024, 16:23 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ‘ಚಿಕ್ಕಬಾಣಾವರ–ಬೈಯ್ಯಪ್ಪನಹಳ್ಳಿ ಉಪನಗರ ರೈಲು ಯೋಜನೆ ತೀರಾ ವಿಳಂಬವಾಗುತ್ತಿದ್ದು, ಅದರಿಂದಾಗುವ ಹೆಚ್ಚುವರಿ ವೆಚ್ಚವನ್ನು ಗುತ್ತಿಗೆದಾರ ಸಂಸ್ಥೆಯಿಂದಲೇ ವಸೂಲಿ ಮಾಡಬೇಕಾಗುತ್ತದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದರು. 

ಯೋಜನೆಯ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೇ ಇರುವ ಬಗ್ಗೆ ಅವರು, ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರ ಕಂಪನಿ ಎಲ್‌ ಅಂಡ್‌ ಟಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

‘2025ರ ಆಗಸ್ಟ್‌ ವೇಳೆಗೆ ಮೊದಲ ರೈಲು ಸಂಚಾರ ಆರಂಭಿಸುವುದಾಗಿ ಜನರಿಗೆ ಮಾತು ಕೊಟ್ಟಿದ್ದೇವೆ. ಇದುವರೆಗೂ ಒಟ್ಟು ₹459 ಕೋಟಿ ವೆಚ್ಚದ ಆರ್ಥಿಕ ಪ್ರಗತಿ ಸಾಧಿಸಬೇಕಾಗಿತ್ತು. ಆದರೆ, ಆಗಿರುವುದು ಕೇವಲ ₹86 ಕೋಟಿ. ಇದೇ ಪರಿಸ್ಥಿತಿ ಮುಂದುವರಿದರೆ ಗುತ್ತಿಗೆದಾರ ಸಂಸ್ಥೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು. 

ADVERTISEMENT

‘ಕಾಮಗಾರಿ ಕುಂಠಿತವಾಗಿದೆ. ವಾರ ಮತ್ತು ತಿಂಗಳ ಆಧಾರದಲ್ಲಿ ಪ್ರಗತಿಯನ್ನು ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ಅವಧಿಯನ್ನು ವಿಸ್ತರಿಸುವುದಿಲ್ಲ. ಗಡುವಿನೊಳಗೇ ಮುಗಿಸುವ ಹಾಗೆ ರಾತ್ರಿ-ಹಗಲು ಕೆಲಸ ಮಾಡಬೇಕು’ ಎಂದು ಕೆ–ರೈಡ್‌ ಅಧಿಕಾರಿಗಳಿಗೆ ಸೂಚಿಸಿದರು.

ಹೀಲಲಗಿ- ರಾಜಾನುಕುಂಟೆ ಯೋಜನೆಯ ಗುತ್ತಿಗೆಯನ್ನೂ  ಎಲ್‌ ಆಂಡ್‌ ಟಿ ಪಡೆದಿದ್ದು, ಆ ಕಾಮಗಾರಿಯನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಮತ್ತು ಕೆ-ರೈಡ್‌ ವ್ಯವಸ್ಥಾಪಕ ನಿರ್ದೇಶಕಿ ಎನ್.‌ಮಂಜುಳಾ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಸಭೆಯಲ್ಲಿ ಇದ್ದರು.

ರೈಲು ಯೋಜನೆಗಳ ಪರಿಶೀಲನೆ

ರೈಲ್ವೆ ಜತೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಂಡಿರುವ ರಾಜ್ಯದ ರೈಲು ಯೋಜನೆಗಳಿಗೆ ಎದುರಾಗಿರುವ ಭೂಸ್ವಾಧೀನಕ್ಕೆ ತೊಡಕು ಸೇರಿ ವಿವಿಧ ಸಮಸ್ಯೆಗಳ ಕುರಿತು ಎಂ.ಬಿ.ಪಾಟೀಲ ಅವರು ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ಸಭೆ ನಡೆಸಿದರು. ಬೆಂಗಳೂರು–ವಿಜಯಪುರ ಮಾರ್ಗದಲ್ಲಿ ಬಾಕಿ ಇರುವ ಕಿರುಸೇತುವೆಗಳ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು. ಇದರಿಂದ ಪ್ರಯಾಣದ ಅವಧಿ 14–15 ಗಂಟೆಯಿಂದ 10–11 ಗಂಟೆಗೆ ಇಳಿಕೆಯಾಗಲಿದೆ ಎಂದರು. ಗದಗ- ವಾಡಿ ಧಾರವಾಡ-ಬೆಳಗಾವಿ ತುಮಕೂರು- ದಾವಣಗೆರೆ ತುಮಕೂರು-ರಾಯದುರ್ಗ ರೈಲು ಯೋಜನೆಗಳ ಪ್ರಗತಿ ಪರಿಶೀಲಿಸಿದರು. ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.