ADVERTISEMENT

ತಾಲ್ಲೂಕು ಆರೋಗ್ಯ ಅಧಿಕಾರಿಗೆ ಎಂಬಿಬಿಎಸ್‌ ಪದವಿ ಕಡ್ಡಾಯ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 19:54 IST
Last Updated 18 ಏಪ್ರಿಲ್ 2024, 19:54 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಎಂಬಿಬಿಎಸ್‌ ಪದವಿ ಪಡೆಯದ ದಂತವೈದ್ಯರನ್ನು ರಾಜ್ಯ ಸರ್ಕಾರಿ ಸೇವೆಗಳ ವ್ಯಾಪ್ತಿಗೆ ಒಳಪಡುವ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ’ ಎಂದು ಹೈಕೋರ್ಟ್‌ ಆದೇಶಿಸಿದೆ.

ತಮ್ಮನ್ನು ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಆರೋಗ್ಯ ಕಚೇರಿಯ ವೈದ್ಯಾಧಿಕಾರಿಯಾಗಿ ನಿಯೋಜಿಸಿದ್ದ ಆದೇಶ ಹಿಂಪಡೆದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಡಾ.ವಿದ್ಯಾವತಿ ಯು. ಪಾಟೀಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್‌ ಮತ್ತು ನ್ಯಾಯಮೂರ್ತಿ ಉಮೇಶ್‌ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.

‘ಸರ್ಕಾರ 2021ರ ಜೂನ್‌ 1ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ (ಸಾಮಾನ್ಯ ಕರ್ತವ್ಯನಿರತ ವೈದ್ಯಾಧಿಕಾರಿ) ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅರ್ಹರಾಗಿರುತ್ತಾರೆ. 1992ರ ಜುಲೈ 17ರಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಹೊರಡಿಸಿರುವ ಅಧಿಸೂಚನೆ ಪ್ರಕಾರ ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಎಂಬಿಬಿಎಸ್‌ ಪದವಿ ಪಡೆದಿರಬೇಕು. ಪ್ರಕರಣದಲ್ಲಿ ಅರ್ಜಿದಾರರು ದಂತವೈದ್ಯರಾಗಿದ್ದು, ಎಂಬಿಬಿಎಂಪಿ ಪದವಿ ಪಡೆದಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.