ಬೆಂಗಳೂರು: ಸರ್ಕಾರದಿಂದ ರಿಯಾಯಿತಿ ಪಡೆದುಕೊಂಡು ಸ್ಥಳೀಯರಿಗೆ ಉದ್ಯೋಗ ನೀಡದೇ ಇದ್ದರೆ ಅಂತಹ ಉದ್ಯಮಗಳು ಅಥವಾ ಕಂಪನಿಗಳಿಂದ ರಿಯಾಯ್ತಿಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ವಿಧಾನಸಭೆಯಲ್ಲಿ ಜೆಡಿಎಸ್‌ನ ಸಮೃದ್ಧಿ ಮಂಜುನಾಥ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿ ಈ ವಿಷಯ ತಿಳಿಸಿದರು.
ಹಲವು ಉದ್ಯಮಗಳಿಗೆ ರಿಯಾಯಿತಿ ದರದಲ್ಲಿ ಭೂಮಿ, ನೀರು, ವಿದ್ಯುತ್ ನೀಡಲಾಗಿದೆ. ಈ ರೀತಿ ರಿಯಾಯಿತಿ ಪಡೆದವರು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಯಾವುದೇ ರಿಯಾಯಿತಿ ಪಡೆಯದ ಉದ್ಯಮಗಳಿಗೆ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ನಿಯಮ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯ ಅರವಿಂದ ಬೆಲ್ಲದ ಮಾತನಾಡಿ, ‘ಇನ್ಫೊಸಿಸ್ ಉದ್ಯಮ ಸ್ಥಾಪಿಸುವುದಾಗಿ ಹುಬ್ಬಳ್ಳಿಯಲ್ಲಿ ಸರ್ಕಾರದಿಂದ ಜಮೀನು ಪಡೆಯಿತು. ಆದರೆ, ಅಲ್ಲಿ ಉದ್ಯಮ ಸ್ಥಾಪಿಸದೇ ಮರಗಳನ್ನು ಬೆಳೆಸಿದೆ. ಭೂಮಿ ಬಿಟ್ಟುಕೊಟ್ಟವರು ತಮಗೆ ಉದ್ಯೋಗ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅವರು ನಮ್ಮ ಬಳಿ ನಿರೀಕ್ಷೆಯಿಂದ ಬಂದು ವಿಚಾರಿಸುತ್ತಾರೆ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ, ನಿರ್ದಿಷ್ಟ ಪ್ರಕರಣಗಳಿದ್ದರೆ, ತಿಳಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ನಿಯಮ ಉಲ್ಲಂಘಿಸುವ ಉದ್ಯಮಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವೇ ದಂಡವನ್ನಾದರೂ ವಿಧಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.