ADVERTISEMENT

ಅನುದಾನ ಬಿಡುಗಡೆಗೆ ಪಟ್ಟು: ಆಯುಕ್ತರ ವಿರುದ್ಧ ಸದಸ್ಯರ ಆಕ್ರೋಶ

‘ಸ್ವಚ್ಛ ಸರ್ವೇಕ್ಷಣ್‌’ಗೆ ಸಹಕರಿಸದಿರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 21:19 IST
Last Updated 2 ಜನವರಿ 2020, 21:19 IST
ಅನುದಾನ ಬಿಡುಗಡೆಗೆ ಪಟ್ಟುಹಿಡಿದ ಪಾಲಿಕೆ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು
ಅನುದಾನ ಬಿಡುಗಡೆಗೆ ಪಟ್ಟುಹಿಡಿದ ಪಾಲಿಕೆ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು   

ಮೈಸೂರು: ಮೇಯರ್‌ ಅನುದಾನದಡಿ ಪ್ರತಿ ವಾರ್ಡ್‌ಗೆ ಘೋಷಿಸಿರುವ ₹ 50 ಲಕ್ಷ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ, ಸ್ವಚ್ಛ ಸರ್ವೇಕ್ಷಣ್‌ –2020ಕ್ಕೆ ಸಹಕಾರ ನೀಡದಿರಲು ಪಾಲಿಕೆ ಸದಸ್ಯರು ನಿರ್ಧರಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಗುರುವಾರ ಪಾಲಿಕೆಯ ಹಳೆ ಕೌನ್ಸಿಲ್‌ ಹಾಲ್‌ನಲ್ಲಿ ಸಭೆ ಕರೆಯಲಾಗಿತ್ತು. ಅನುದಾನ ಬಿಡುಗಡೆಯಾದರೆ ಮಾತ್ರ ‘ಸ್ವಚ್ಛ ಭಾರತ’ ಸಮೀಕ್ಷೆಗೆ ಸಹಕರಿಸುವುದಾಗಿ ಹೇಳಿದ ಸದಸ್ಯರು, ಪಕ್ಷಭೇದ ಮರೆತು ಸಭೆಯಿಂದ ಹೊರನಡೆದರು.

ಆರಂಭದಲ್ಲಿ ಕೆಲಹೊತ್ತು ಸ್ವಚ್ಛತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದ ಸದಸ್ಯರು ಕೊನೆಯಲ್ಲಿ ಆಯುಕ್ತರ ಧೋರಣೆ ವಿರುದ್ಧ ಅಸಮಾ ಧಾನ ಹೊರಹಾಕಿದರು. ಮೇಯರ್‌ ಅನು ದಾನದಡಿ ಘೋಷಿಸಿದ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಗುರುದತ್ತ ಹೆಗಡೆ, ‘ಪಾಲಿಕೆಯ ಹಣಕಾಸಿನ ಸ್ಥಿತಿ ಚೆನ್ನಾಗಿಲ್ಲ. ಮುಂದೆ ಹಣ ಬಿಡುಗಡೆ ಮಾಡುತ್ತೇವೆ. ಸ್ವಚ್ಛ ಸರ್ವೇಕ್ಷಣ್‌ ಕುರಿತು ಸಲಹೆ ಪಡೆಯಲು ಈ ಸಭೆ ಏರ್ಪಡಿಸಲಾಗಿದೆ. ಅನುದಾನ ಬಿಡುಗಡೆ ಬಗ್ಗೆ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸೋಣ. ಎಲ್ಲರೂ ಸಹಕರಿಸಿ’ ಎಂದು ಮನವಿ ಮಾಡಿದರು.

ಆದರೆ ಪಟ್ಟು ಬಿಡದ ಸದಸ್ಯರು ಸಭೆ ಯಿಂದ ಹೊರನಡೆದರು. ಪಾಲಿಕೆಯ 65 ಸದಸ್ಯರಲ್ಲಿ ಸುಮಾರು 45 ಮಂದಿ ಸಭೆಯಲ್ಲಿ ಹಾಜರಿದ್ದರು.

ಸದಸ್ಯರ ಮನ ಒಲಿಸಲು ಮುಂದಾ ಗದ ಆಯಕ್ತರ ವಿರುದ್ಧ ಮೇಯರ್‌ ಪುಷ್ಪ ಲತಾ ಜಗನ್ನಾಥ್‌ ಆಕ್ರೋಶ ವ್ಯಕ್ತಪಡಿಸಿದರು. ‘65 ಸದಸ್ಯರ ಪ್ರತಿನಿಧಿ ಯಾಗಿ ನಾನು ಇಲ್ಲಿದ್ದೇನೆ. ಸದಸ್ಯರನ್ನು ಕರೆದು ಕೂರಿಸಬೇಕಿತ್ತು. ನೀವು ಸುಮ್ಮನಿದ್ದದ್ದು ಏಕೆ? ಇದು ಸರಿಯಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು. ‘ಗೌರವ ಕೊಟ್ಟು ಮಾತನಾಡಿ. ಅನುದಾನದ ವಿಚಾರ ಇಲ್ಲಿ ಚರ್ಚಿ ಸುವುದು ಬೇಡ. ಕಚೇರಿಯಲ್ಲಿ ಮಾತ ನಾಡೋಣ’ ಎಂದು ಹೊರನಡೆದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿ ಸಿದ ಮೇಯರ್‌, ‘ಕೌನ್ಸಿಲ್‌ ಸಭೆಯಲ್ಲಿ ಘೋಷಿಸಿದ್ದ ಅನುದಾನ ಬಿಡುಗಡೆ ಮಾಡದ್ದಕ್ಕಾಗಿ ಸದಸ್ಯರು ಆಯುಕ್ತರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಹೊರನಡೆದರು. ನಗರದ ಸ್ವಚ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ. ಸ್ವಚ್ಛ ಸರ್ವೇಕ್ಷಣ್‌ಗೆ ಕೈಜೋಡಿಸುಸುವಂತೆ ಸದಸ್ಯರಿಗೆ ಮನವಿ ಮಾಡುತ್ತೇನೆ’ ಎಂದರು.

ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಪ್ರತಿ ವಾರ್ಡ್‌ಗೆ ₹ 50 ಲಕ್ಷ ಬಿಡುಗಡೆ ಮಾಡಲು ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ, ಅನು ದಾನ ಇದುವರೆಗೂ ಬಿಡುಗಡೆಯಾಗದಿರುವುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.