ADVERTISEMENT

‘ಶ್ರುತಿ ಹೇಳಿದಂತೆ ಏನೂ ನಡೆದಿಲ್ಲ’

ನಿರ್ದೇಶಕ, ನಿರ್ಮಾಪಕರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 19:45 IST
Last Updated 31 ಅಕ್ಟೋಬರ್ 2018, 19:45 IST
   

ಬೆಂಗಳೂರು: ‘ವಿಸ್ಮಯ ಸಿನಿಮಾಕ್ಕೆ ಮೊದಲು ಬರೆದಿದ್ದ ಸ್ಕ್ರಿಪ್ಟ್‌ನಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಹೆಚ್ಚಿದ್ದವು. ಅಂಥ ದೃಶ್ಯಗಳನ್ನು ಕಡಿಮೆ ಮಾಡುವಂತೆ ಅರ್ಜುನ್ ಸರ್ಜಾ ಅವರೇ ಹೇಳಿದ್ದರು. ಹೀಗಾಗಿ, ಕೊನೇ ಹಂತದಲ್ಲಿ ಸ್ಕ್ರಿಪ್ಟ್ ಬದಲಾವಣೆ ಮಾಡಿದ್ದೆ. ನಟಿ ಶ್ರುತಿ ಹರಿಹರನ್ ಆರೋಪ ಮಾಡಿರುವಂತೆ ಚಿತ್ರೀಕರಣದ ಸ್ಥಳದಲ್ಲಿ ಏನೂ ನಡೆದಿಲ್ಲ...’

ನಿರ್ದೇಶಕ ಅರುಣ್ ವೈದ್ಯನಾಥನ್ ಕಬ್ಬನ್‌ಪಾರ್ಕ್ ಪೊಲೀಸರಿಗೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ‘ಅರ್ಜುನ್ ಸರ್ ಒಬ್ಬ ಸಂಭಾವಿತ ನಟ. ನಾನು ಕಂಡಂತೆ ಅವರು ಶ್ರುತಿ ಜತೆ ಕೆಟ್ಟದಾಗಿ ನಡೆದುಕೊಂಡಿಲ್ಲ. ರೊಮ್ಯಾಂಟಿಕ್ ದೃಶ್ಯದ ರಿಹರ್ಸಲ್ ಮಾಡಿದ್ದು ನಿಜ. ಹಾಗೆಯೇ, ಆ ಸಂದರ್ಭದಲ್ಲಿ ಶ್ರುತಿ ಅವರಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿರಲಿಲ್ಲ ಎಂಬುದೂ ನಿಜ’ ಎಂದಿದ್ದಾರೆ.

ನಿರ್ಮಾಪಕರು ಹೇಳಿದ್ದೇನು: ‘43 ದಿನಗಳಲ್ಲಿ ‘ವಿಸ್ಮಯ’ ಸಿನಿಮಾ ಎರಡು ಭಾಷೆಗಳಲ್ಲಿ ಸಿದ್ಧವಾಯಿತು. ಇಡೀ ತಂಡದ ಸಹಕಾರದಿಂದ ಅದು ಸಾಧ್ಯವಾಯಿತು. ಆದರೆ, ಶ್ರುತಿ ಈಗ ಆರೋಪ ಮಾಡಿರುವುದನ್ನು ನೋಡಿ ಆಶ್ಚರ್ಯವಾಯಿತು. ನನ್ನ ಗಮನಕ್ಕೆ ಬಂದ ಹಾಗೆ ಆ ರೀತಿಯ ಘಟನೆ ನಡೆದಿಲ್ಲ’ ಎಂದು ನಿರ್ಮಾಪಕ ಉಮೇಶ್ ಸಹ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ADVERTISEMENT

‘ಆ ಸಿನಿಮಾಗೆ ಖಳನಟನ ಪಾತ್ರಕ್ಕೆ ಮೊದಲು ಚೇತನ್ ಅವರ ಹೆಸರನ್ನೇ ಆಯ್ಕೆ ಮಾಡಿದ್ದೆವು. ಆದರೆ, ಆ ಸಂದರ್ಭದಲ್ಲಿ ಅವರು ಬೇರೊಂದು ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಹೀಗಾಗಿ, ಜಯರಾಮ್ ಕಾರ್ತಿಕ್ (ಜೆ.ಕೆ) ಅವರನ್ನು ಆಯ್ಕೆ ಮಾಡಿದ್ದೆವು’ ಎಂದೂ ಅವರು ಹೇಳಿದ್ದಾರೆ.

ಶ್ರುತಿ ವಿರುದ್ಧ ಸರ್ಜಾ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನ.2ಕ್ಕೆ ಮುಂದೂಡಿದೆ.

ಸಂಗೀತಾ, ಶ್ರುತಿ ವಿರುದ್ಧ ಗುರುಪ್ರಸಾದ್‌ ಗುಡುಗು

ಬೆಂಗಳೂರು: ಮೀ ಟೂ ಅಭಿಯಾನಕ್ಕೆ ಸಂಬಂಧಿಸಿದಂತೆ ಸಂಗೀತಾ ಭಟ್ ಮತ್ತು ಶ್ರುತಿ ಹರಿಹರನ್ ವಿರುದ್ಧ ನಿರ್ದೇಶಕ ಗುರುಪ್ರಸಾದ್ ಹರಿಹಾಯ್ದಿದ್ದಾರೆ. ಬೆಂಗಳೂರಿನಲ್ಲಿ ‘ಕುಷ್ಕ’ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವಕಾಶಕ್ಕಾಗಿ ಮದುವೆಯ ವಿಷಯವನ್ನು ಮುಚ್ಚಿಟ್ಟು, ಈಗ ಹೊರಗೆ ಹಾಕುತ್ತಿರುವುದರ ಉದ್ದೇಶ ಏನು? ಇವರು ತಮ್ಮ ಪತಿ, ಅತ್ತೆ, ಮಾವ ಅವರ ಎದುರಿಗೆ ತಮ್ಮ ಪಾತಿವ್ರತ್ಯ ಸಾಬೀತುಮಾಡಲು ಹೊರಟಿದ್ದಾರೆಯೇ?’ ಎಂದು ಪ್ರಶ್ನಿಸಿದ್ದಲ್ಲದೇ ಅವರನ್ನು ‘ವಿಷಕನ್ಯೆಯರು’ ಎಂದು ಜರಿದರು.

‘ನನ್ನ ಮೇಲೆ ಬಂದಿರುವ ಆರೋಪಗಳು ಗೊತ್ತು. ಆದರೂ ಮೌನವಹಿಸಿದ್ದೇನೆ. ಅದರ ಅರ್ಥ ನನಗೆ ಉತ್ತರ ಕೊಡಲು ಬರುವುದಿಲ್ಲ ಎಂದಲ್ಲ. ನಾವು ಗಂಡಸರು ಮಾತನಾಡಲು ಶುರುಮಾಡಿದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಆತಂಕದಿಂದ ಸುಮ್ಮನಿರುತ್ತೇವೆ’ ಎಂದು ಹೇಳಿದರು.

'ಎರಡನೇ ಸಲ’ ಸಿನಿಮಾ ಬೆತ್ತಲೆ ಬೆನ್ನಿನ ದೃಶ್ಯ ಚಿತ್ರೀಕರಿಸುವಾಗ ನನ್ನ ಹೆಂಡತಿ ಮತ್ತು ಮಗಳು ಪಕ್ಕದಲ್ಲೇ ಇದ್ದರು. ನಾನು ಫೋಟೊ ಕಳಿಸಿ ಎಂದಾಗ ಅವರು ಎಂಥ ಫೋಟೊ ಕಳಿಸಿದ್ದರು ಎಂಬುದು ಇನ್ನೂ ನನ್ನ ಬಳಿ ಇದೆ. ಕೆಲವರು ಹೊರಗೆ ಹೋದರೆ ಚಿತ್ರರಂಗದ ಆರೋಗ್ಯ ಸುಧಾರಿಸುತ್ತದೆ. ಅವರು ಈಗ ಚಿತ್ರರಂಗದಿಂದ ದೂರ ಇದ್ದೇನೆ ಎಂದು ಹೇಳಿದ್ದಾರೆ. ಚೆನ್ನಾಗಿರಲಿ' ಎಂದು ಹೆಸರು ಹೇಳದೇ ಸಂಗೀತಾ ಭಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಯಾರೋ ಸಂಸ್ಕಾರ ಇಲ್ಲದವರು ಹೇಳಿದ ಮಾತಿಗೆಲ್ಲ ಯಾಕೆ ತಲೆಕೆಡಿಸಿಕೊಳ್ಳಲಿ. ಇವರೊಬ್ಬರೇ ಸುಂದರಿ ಅಲ್ಲ; ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಹುಡುಗಿಯನ್ನೂ ಕರೆದುಕೊಂಡು ಬಂದು ನಾಯಕಿಯನ್ನಾಗಿ ಮಾಡಬಲ್ಲೆ’ ಎಂದೂ ಅವರು ಆಕ್ರೋಶದಿಂದ ಹೇಳಿದರು.

ಅರ್ಜುನ್ ಸರ್ಜಾ ಅರ್ಜಿ ವಿಚಾರಣೆ ನ.2ಕ್ಕೆ ಮುಂದೂಡಿಕೆ

ಬೆಂಗಳೂರು: ಮೀ–ಟೂ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಸಲ್ಲಿಸಿರುವ ದೂರು ರದ್ದುಗೊಳಿಸುವಂತೆ ಕೋರಿ ನಟ ಅರ್ಜುನ ಸರ್ಜಾ ದಾಖಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ‌ವೆಂಬರ್ 2ರಂದು ನಡೆಸಲಿದೆ.

ಈ ಕುರಿತಂತೆ ಅರ್ಜುನ ಸರ್ಜಾ ಪರ ಹಿರಿಯ ವಕೀಲ ಬಿ.ವಿ‌.ಆಚಾರ್ಯ ಅವರು ಬುಧವಾರ, ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮೆಮೊ ಸಲ್ಲಿಸಿ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಶುಕ್ರವಾರ (ನ.2) ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತು.

ಕೇವಿಯೆಟ್‌: ’ಅರ್ಜುನ್ ಸರ್ಜಾ ಸಲ್ಲಿಸಿರುವ ಅರ್ಜಿ ಸಂಬಂಧ ಯಾವುದೇ ಆದೇಶ ಹೊರಡಿಸುವ ಮುನ್ನ ನನ್ನ ವಾದವನ್ನೂ ಆಲಿಸಬೇಕು’ ಎಂದು ನಟಿ ಶೃತಿ ಹರಿಹರನ್ ಬುಧವಾರ ಕೇವಿಯಟ್ ಸಲ್ಲಿಸಿದ್ದಾರೆ.

ನನ್ನನ್ನೂ ಕಾಡಿತ್ತು ನಟಿ ಪಾರ್ವತಿ

ಮುಂಬೈ: ಬಹುಭಾಷಾ ನಟಿ ಪಾರ್ವತಿ ಅವರು ಮೀಟೂ ಆರೋಪ ಮಾಡಿದ್ದಾರೆ.

ಮಾಮಿ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಾತನಾಡಿದ ಅವರು, ‘ ನಾನು ಬಾಲ್ಯದಲ್ಲೇ ಲೈಂಗಿಕ ಕಿರುಕುಳ ಎದುರಿಸಿದ್ದೆ. 12 ವರ್ಷಗಳ ಕಾಲ ಈ ಘಟನೆ ನನ್ನನ್ನು ಕಾಡಿತ್ತು. ಲೈಂಗಿಕ ದೌರ್ಜನ್ಯ ನಡೆದಾಗ ನನಗೆ ನಾಲ್ಕು ವರ್ಷವಿರಬಹುದು. 17 ವರ್ಷವಾದ ಮೇಲೆ ನನಗೆ ಅದರ ಅರಿವಾಯಿತು. ಇದರ ಬಗ್ಗೆ ಮಾತನಾಡಲು ಮತ್ತೆ 12 ವರ್ಷ ಹಿಡಿದಿದೆ’ ಎಂದು ಅವರು ಹೇಳಿದ್ದಾರೆ.

ಕಲ್ಪಿತ ಆರೋಪಗಳಿಂದ ಧಕ್ಕೆ: ಅಕ್ಬರ್‌

ನವದೆಹಲಿ (ಪಿಟಿಐ): ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್‌ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ಕೋರ್ಟ್‌ನಲ್ಲಿ ಬುಧವಾರ ತಮ್ಮ ಹೇಳಿಕೆ ದಾಖಲಿಸಿದರು.

ಲೈಂಗಿಕ ಕಿರುಕುಳದ ಆರೋಪ ಅಲ್ಲಗಳೆದಿದ್ದ ಅಕ್ಬರ್‌, ಪ್ರಿಯಾ ರಮಣಿ ವಿರುದ್ಧ ಅ. 15ರಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅ. 17ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

‘ಎರಡು ದಶಕಗಳ ಹಿಂದೆ ಘಟಿಸದೇ ಇರುವ ಪ್ರಸಂಗವನ್ನು ಸೃಷ್ಟಿಸಿ ಮಾಡಿರುವಂತಹ ನಿರಾಧಾರ ಆರೋಪಗಳಿಂದ ನನ್ನ ವರ್ಚಸ್ಸಿಗೆ ಧಕ್ಕೆಯಾಗಿದೆ’ ಎಂದು ಅವರು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಧೀಶ ಸಮರ್‌ ವಿಶಾಲ್‌ ಅವರ ಮುಂದೆ ಹೇಳಿಕೆ ದಾಖಲಿಸಿದರು.

‘ನನಗೆ ನ್ಯಾಯ ಬೇಕಾಗಿದೆ. ಇದಕ್ಕಾಗಿ ನಾನು ನನ್ನ ಅಧಿಕಾರ ಬಳಸಿಕೊಳ್ಳದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಜನರ ಕಣ್ಣಲ್ಲಿ, ನನ್ನ ಬಂಧು–ಬಾಂಧವರು ಹಾಗೂ ಪರಿಚಿತರ ದೃಷ್ಟಿಯಲ್ಲಿ ನನ್ನ ಹೆಸರಿಗೆ ಮಸಿ ಬಳದಂತಾಗಿದೆ’ ಎಂದು ಹೇಳಿಕೆ ನೀಡಿದರು. ಹೇಳಿಕೆ ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನು ನ. 12ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.