ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ | ‘ನಗರ ನಕ್ಸಲ’ ಘೋಷಿಸಿಕೊಂಡ ಕಾರ್ನಾಡ

ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶದಲ್ಲಿ ಫಲಕ ಧರಿಸಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 14:19 IST
Last Updated 10 ಜೂನ್ 2019, 14:19 IST
ಚಿತ್ರ: ಟ್ವಿಟರ್‌
ಚಿತ್ರ: ಟ್ವಿಟರ್‌   

ಬೆಂಗಳೂರು: ‘ನಾನೂ ನಗರ ನಕ್ಸಲ’ ಎಂದು ಸಾಹಿತಿ ಗಿರೀಶ ಕಾರ್ನಾಡ ಅವರು ಕೊರಳಿಗೆ ಫಲಕ ಹಾಕಿಕೊಂಡು ಘೋಷಿಸಿಕೊಂಡರು.

ಗೌರಿ ಲಂಕೇಶ್‌ ಬಳಗ ಹಾಗೂ ಗೌರಿ ಸ್ಮಾರಕ ಟ್ರಸ್ಟ್‌ ಆಶ್ರಯದಲ್ಲಿ ನಡೆದ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶದಲ್ಲಿ ಅವರು ಬುದ್ದಿಜೀವಿಗಳ, ಲೇಖಕರ ಹತ್ಯೆಗೆ ಈ ರೀತಿ ಖಂಡನೆ ವ್ಯಕ್ತಪಡಿಸಿದರು.

‘ಆತಂಕವಾದ ಎಂದರೆ ವ್ಯಾಪಕವಾಗಿರುವ ಶಬ್ದ. ಅದಕ್ಕೆ ಬೇರೆ ಬೇರೆ ಆಯಾಮಗಳಿವೆ. ಲೇಖಕರನ್ನು, ಚಿಂತಕರನ್ನು ಗುರಿಯಿಟ್ಟುಕೊಳ್ಳುವುದು... ಇದನ್ನೆಲ್ಲಾ ನೋಡಿದರೆ ಏನು ಹೇಳಬೇಕು ಎಂಬುದೇ ಗೊತ್ತಿಲ್ಲ. ಪೊಲೀಸರೂ ರಾಜಕಾರಣಿಗಳ ಹಿಡಿತದಲ್ಲಿರುವಾಗ ಅವರೂ ಅಸಹಾಯಕರಾಗಿದ್ದಾರೆ’ ಎಂದರು.

ADVERTISEMENT

ಕಗ್ಗತ್ತಲಿನ ಕಾಲದ ಕೋಲ್ಮಿಂಚುಗಳು ವಿಚಾರ ಗೋಷ್ಠಿಯಲ್ಲಿ ಯುವ ಕವಿ ಉಮರ್‌ ಖಾಲಿದ್‌ ಮಾತನಾಡಿ, ‘2019ರ ಚುನಾವಣೆ ಪ್ರಜಾಸತ್ತೆ, ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಆಗಬೇಕು. ಗೌರಿ ಹತ್ಯೆಯನ್ನು ನೋಡಿದರೆ, ಕೋಮುವಾದಿಗಳಿಗೆ ಗೌರಿ ಅವರ ವಿಚಾರಧಾರೆಗಳು ಎಷ್ಟು ಭಯ ಹುಟ್ಟಿಸಿದ್ದವು ಎಂಬುದು ಅರಿವಾಗುತ್ತದೆ’ ಎಂದರು.

‘ನನ್ನ ಮೇಲೆ ಹಲ್ಲೆ ಮಾಡುವ ಮೂಲಕ ನನ್ನನ್ನು ಮೌನವಾಗಿಸುವ ಪ್ರಯತ್ನ ಮಾಡಿದರು. ಅದು ಅಸಾಧ್ಯ. ನಾನು ದೇಶದ್ರೋಹಿ ಅಲ್ಲ. ರೈತರ ಸಾಲ ಮನ್ನಾಕ್ಕೆ ಹಣವಿಲ್ಲ. ಕಾರ್ಪೊರೇಟ್‌ ಸಾಲ ಮನ್ನಾ ಮಾಡಿದವರು, ಭೇಟಿ ಬಚಾವೋ ಎನ್ನುತ್ತಲೇ ಅತ್ಯಾಚಾರಿಗಳನ್ನು ಸಮರ್ಥಿಸುವವರು ದೇಶದ್ರೋಹಿಗಳು’ ಎಂದು ಕಿಡಿಕಾರಿದರು.

ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಮಾತನಾಡಿ, ‘ನಾಲ್ಕು ವರ್ಷಗಳಿಂದ ದೇಶವನ್ನು ಕತ್ತಲು ಆವರಿಸಿದೆ. ಅಂದೇ ನಾವು ಇದೊಂದು ಕತ್ತಲು ಎಂದು ಹೇಳುತ್ತಿದ್ದರೂ ಯಾರೂ ನಂಬಲಿಲ್ಲ. ಕೆಲವು ಕೋಲ್ಮಿಂಚುಗಳನ್ನು ಹತ್ಯೆ ಮಾಡುವ ಮೂಲಕ ಆರಿಸಲಾಯಿತು. ಆದರೆ, ಕತ್ತಲು ಆವರಿಸಿದ ಅರಿವಾಗುತ್ತಿದ್ದಂತೆಯೇ ಸಾವಿರಾರು ಕೋಲ್ಮಿಂಚುಗಳು ಹುಟ್ಟಿ ಜಗತ್ತನ್ನು ಬೆಳಗಲು ಬಂದಿವೆ’ ಎಂದು ಹೇಳಿದರು.

‘ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಗುಂಡು, ಲಾಠಿಯ ಮೂಲಕ ಪ್ರತಿರೋಧ ಒಡ್ಡುತ್ತಾರಾದರೆ ಅವರು ಸೈದ್ಧಾಂತಿಕವಾಗಿ ದಿವಾಳಿಯಾಗಿದ್ದಾರೆ ಎಂದು ಅರ್ಥ. ದೇಶದಲ್ಲಿ ಬುದ್ದಿಜೀವಿಗಳನ್ನು ಹಂಗಿಸುವ, ಲೇವಡಿ ಮಾಡುವ ಕೆಲಸ ಆಗುತ್ತಿದೆ. ಇನ್ನು 7 ವರ್ಷ ಕಳೆದರೆ ಆರ್‌ಎಸ್‌ಎಸ್‌ಗೆ 100 ವರ್ಷ ತುಂಬುತ್ತಿದೆ. ಇಷ್ಟು ವರ್ಷ ಕಳೆದರೂ ಆ ಸಂಘಟನೆಗೆ ಒಬ್ಬನೇ ಬುದ್ದಿಜೀವಿಯನ್ನು ಸೃಷ್ಟಿಸಲಾಗಲಿಲ್ಲ’ ಎಂದರು.

‘ಗೌರಿ ಕೊಲೆ ಒಂದು ತಾರ್ಕಿಕ ಅಂತ್ಯಕ್ಕೆ ಬಂದಿದೆ. ಗಾಂಧಿ ಹತ್ಯೆಯ ತನಿಖೆ ನಂತರ ಪೊಲೀಸರು ಪಕ್ಕಾ ಕಸುಬುದಾರರಾಗಿ ಪತ್ತೆ ಮಾಡಿದ ಪ್ರಕರಣ ಗೌರಿ ಅವರದ್ದು’ ಎಂದರು.

ಸ್ವಾಮಿ ಅಗ್ನಿವೇಶ್‌ ಮಾತನಾಡಿ, ‘ನಿಜವಾದ ಧರ್ಮ ಮನುಷ್ಯನ್ನು ನಿರ್ಮಾಣ ಮಾಡಬೇಕು. ಅದನ್ನು ಅಂತರಂಗದಿಂದಲೇ ಬೆಳೆಸಬೇಕು. ಕೋಮುವಾದಿ ಚಿಂತನೆಗಳನ್ನು ಧರ್ಮ ಎನ್ನಲಾಗದು. ಸರ್ಕಾರಕ್ಕೆ ನಾನೂ ದೇಶ ಎಂಬುದನ್ನು ಹೇಳಬೇಕು. ಸರ್ಕಾರದ ವಿರುದ್ಧ ಮಾತನಾಡುವವರನ್ನೆಲ್ಲಾ ದೇಶದ್ರೋಹಿ ಎಂಬು ಪರಿಗಣಿಸುವುದು ನಿಲ್ಲಬೇಕು’ ಎಂದು ಒತ್ತಾಯಿಸಿದರು.

‘ದೇಶದಲ್ಲಿ ಕಾರ್ಪೊರೇಟ್‌ ಅಜೆಂಡಾಗಳನ್ನು ಜಾರಿಗೆ ತರಲು ಇಂಥ ಹತ್ಯೆ, ದೊಂಬಿಗಳನ್ನು ನಡೆಸಲಾಗುತ್ತಿದೆ. ಜನರ ಗಮನ ಬೇರೆಡೆ ಸಳೆಯುವಂತೆ ಮಾಡಿ ತೆರೆಮರೆಯಲ್ಲಿ ಕಾರ್ಪೊರೇಟ್‌ ಉದ್ದೇಶಗಳನ್ನು ಜಾರಿಗೆ ತರಲಾಗುತ್ತಿದೆ. ಏಕೆಂದರೆ ಚುನಾವಣೆ ಗೆಲ್ಲಲು ಇದೇ ಕಾರ್ಪೊರೇಟ್‌ ಶಕ್ತಿಗಳು ಅಧಿಕಾರ ಸ್ಥಾನದಲ್ಲಿರುವವರಿಗೆ ನೆರವಾಗುತ್ತಿವೆ’ ಎಂದು ಟೀಕಿಸಿದರು.

‘ನಾನೊಬ್ಬ ಸನ್ಯಾಸಿ. ನನ್ನ ಮೇಲೆ ಏಕೆ ಹಲ್ಲೆ ಮಾಡಬೇಕಿತ್ತು? ನೀವು ಮಾಡಿದ್ದಲ್ಲ ಅನ್ನಬಹುದು. ಹಾಗಿದ್ದರೆ ನೀವೇಕೆ ಒಂದೂ ಮಾತಾಡಲಿಲ್ಲ? ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದರು. ನಿಮ್ಮ ಮೌನ ನೋಡಿದರೆ ಇಂಥ ಘಟನೆಗಳಿಗೆ ನೀವೇ ಹೊಣೆ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.