ADVERTISEMENT

ರಾಜಕೀಯದ ವ್ಯಾಪಾರೀಕರಣಕ್ಕೆ ಕಡಿವಾಣ ಹೇಗೆ?

ಚಿಂತಕರ ಚಾವಡಿಯಲ್ಲಿ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 20:19 IST
Last Updated 20 ಆಗಸ್ಟ್ 2019, 20:19 IST
ಸಮಾಲೋಚನಾ ಸಭೆಯಲ್ಲಿ ಬಿ.ಟಿ. ಲಲಿತಾ ನಾಯ್ಕ್‌, ಎಸ್.ಜಿ.ಸಿದ್ಧರಾಮಯ್ಯ, ಸಿದ್ದನಗೌಡ ಪಾಟೀಲ, ಮರುಳ ಸಿದ್ಧಪ್ಪ, ಜಿ.ವಿ.ಶ್ರೀರಾಮರೆಡ್ಡಿ, ಎಚ್‌.ಎಸ್‌.ದೊರೆಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ ಹಾಗೂ ಜಿ.ರಾಮಕೃಷ್ಣ ಭಾಗವಹಿಸಿದರು –ಪ್ರಜಾವಾಣಿ ಚಿತ್ರ
ಸಮಾಲೋಚನಾ ಸಭೆಯಲ್ಲಿ ಬಿ.ಟಿ. ಲಲಿತಾ ನಾಯ್ಕ್‌, ಎಸ್.ಜಿ.ಸಿದ್ಧರಾಮಯ್ಯ, ಸಿದ್ದನಗೌಡ ಪಾಟೀಲ, ಮರುಳ ಸಿದ್ಧಪ್ಪ, ಜಿ.ವಿ.ಶ್ರೀರಾಮರೆಡ್ಡಿ, ಎಚ್‌.ಎಸ್‌.ದೊರೆಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ ಹಾಗೂ ಜಿ.ರಾಮಕೃಷ್ಣ ಭಾಗವಹಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರದ 17 ಮಂದಿ ಸಂಪುಟ ಸಚಿವರು ಒಂದೆಡೆ ರಾಜಭವನದಲ್ಲಿ ಮಂಗಳವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದರೆ, ಇನ್ನೊಂದೆಡೆ, 17 ಮಂದಿ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರನ್ನು ಸೋಲಿಸುವುದು ಹೇಗೆ ಎಂಬ ಬಗ್ಗೆ ಶಾಸಕರ ಭವನದಲ್ಲಿ ಸಮಾಲೋಚನೆ ನಡೆಯುತ್ತಿತ್ತು.

ರಾಜ್ಯ ರಾಜಕೀಯದ ವ್ಯಾಪಾರೀಕರಣಕ್ಕೆ ಲಗಾಮು ತೊಡಿಸುವ ಕುರಿತ ಈ ಚರ್ಚೆಯ ನೇತೃತ್ವ ವಹಿಸಿದ್ದು ಸ್ವಾತಂತ್ರ್ಯಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ. ‌ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಹೊರತುಪಡಿಸಿ, ಅಲ್ಲಿ ಜನಪ್ರತಿನಿಧಿಗಳು ಯಾರೂ ಇರಲಿಲ್ಲ. ರಾಜ್ಯದ ಬುದ್ಧಿಜೀವಿ ವಲಯದಲ್ಲಿ ಗುರುತಿಸಿಕೊಂಡ ಸಾಹಿತಿಗಳು, ಚಿಂತಕರು, ರಾಜಕಾರಣಿಗಳು ಸೇರಿ ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಈ ಸಮಾಲೋಚನೆ ನಡೆಸಿದರು.

ರಾಜಕೀಯವನ್ನು ವ್ಯಾಪಾರೀಕರಣದಿಂದ ಮುಕ್ತಗೊಳಿಸುವ ಕುರಿತು ಆಂದೋಲನ ರೂಪಿಸಲು ಹಾಗೂ ಈ ಸಲುವಾಗಿ 10 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕುಮಟ್ಟದಲ್ಲಿ ಯುವಜನರನ್ನು ಸೇರಿಸಿ ಜಾಗೃತಿ ಸಮಾವೇಶಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀರಾಮಿ ರೆಡ್ಡಿ ತಿಳಿಸಿದರು.

ADVERTISEMENT

ಎಚ್‌.ಎಸ್‌.ದೊರೆಸ್ವಾಮಿ, ‘ಜಾಗೃತಿ ಸಮಾವೇಶವನ್ನು ಒಮ್ಮೆ ಮಾಡಿ ಸುಮ್ಮನೆ ಕುಳಿತರೆ ಆಗದು. ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಚಳವಳಿ ವೇಳೆ ವಿವಿಧ ಪ್ರದೇಶಗಳಿಗೆ ತೆರಳಿ ಸಭೆಗಳನ್ನು ನಡೆಸುತ್ತಿದ್ದರು. ಪ್ರಜಾಪ್ರಭುತ್ವ ಉಳಿಸಲು ಅದೇ ಮಾದರಿಯಲ್ಲೇ ಪದೇ ಪದೇ ಸಮಾವೇಶ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರದಿಂದ ಸಂವಿಧಾನಿಕ ಸಂಸ್ಥೆಗಳ ದುರುಪಯೋಗ, ಚುನಾವಣಾ ವ್ಯವಸ್ಥೆಯ ಸುಧಾರಣೆ, ಯುವಜನರಲ್ಲಿ ರಾಜಕೀಯ, ಜಾತ್ಯತೀತ ಪ್ರಜ್ಞೆ ಬೆಳೆಸುವುದು, ಕೋಮುವಾದಕ್ಕೆ ಕಡಿವಾಣ ಹಾಕುವುದು ಮುಂತಾದ ಸವಾಲುಗಳ ಬಗ್ಗೆ ಸಭೆಯಲ್ಲಿ ಪಾಲ್ಗೊಂಡ ಪ್ರಮುಖರು ವಿಚಾರ ಹಂಚಿಕೊಂಡರು. ಪ್ರಮುಖರ ಅಭಿಪ್ರಾಯಗಳು ಇಂತಿವೆ.

ಜಿ.ರಾಮಕೃಷ್ಣ, ಹಿರಿಯ ಚಿಂತಕ: ರಾಜ್ಯದಲ್ಲಿ ಇತ್ತೀಚೆಗೆ ಬರಗಾಲ ಹಾಗೂ ಪ್ರವಾಹಗಳೆರಡನ್ನೂ ನೋಡಿದ್ದೇವೆ. ಕೇವಲ ನಾಡಿಗೆ ಮಾತ್ರವಲ್ಲ. ನಮ್ಮ ಬುದ್ಧಿಗೂ ಬರಗಾಲ ಬಂದಿದೆ. ಅಥವಾ ಹುಚ್ಚು ಪ್ರವಾಹದಲ್ಲಿ ಬುದ್ಧಿ ಕೊಚ್ಚಿಹೋಗಿದೆ. ಇದನ್ನು ಸಹಜ ಸ್ಥಿತಿಗೆ ತರಬೇಕಾದರೆ ಯುವಜನರ ಜೊತೆ ಸಂವಾದ ಏರ್ಪಡಿಸಬೇಕು

ಎಲ್‌.ಹನುಮಂತಯ್ಯ, ರಾಜ್ಯಸಭಾ ಸದಸ್ಯ: ಜಾರಿ ನಿರ್ದೇಶನಾಲಯ, ಸಿಬಿಐ ಮುಂತಾದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನೆಲ್ಲ ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಿದೆ. ರಾಜ್ಯ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖ್ಯ ಸಚೇತಕರೂ ರಾಜೀನಾಮೆ ನೀಡುವ ಸ್ಥಿತಿಗೆ ತಲುಪಿದ್ದೇವೆ. ಈ ಪರಿಸ್ಥಿತಿ ಎಲ್ಲಿಗೆ ಹೋಗುತ್ತದೆಯೋ ಗೊತ್ತಿಲ್ಲ. ಪ್ರಜಾಪ್ರಭುತ್ವ ರಕ್ಷಿಸಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕು.

ಮರುಳಸಿದ್ಧಪ್ಪ, ಸಾಹಿತಿ: ಸಂವಿಧಾನವನ್ನೇ ಬಳಸಿಕೊಂಡು ಸರ್ವಾಧಿಕಾರಿಗಳು ಅಧಿಕಾರಕ್ಕೆ ಬರಬಹುದು ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಆತಂಕ ವ್ಯಕ್ತಪಡಿಸಿದ್ದರು. ಅದು ನಿಜವಾಗುವಂತೆ ತೋರುತ್ತಿದೆ.ಗೆದ್ದವರು ತಾವು ಏನು ಬೇಕಾದರೂ ಮಾಡಬಹುದು ಎಂಬಂತೆ ವರ್ತಿಸುತ್ತಿದ್ದಾರೆ. ಅತ್ಯಂತ ದರಿದ್ರ ಹಾಗೂ ಅಪ್ರಜಾಸತ್ತಾತ್ಮಕ ಸಂದರ್ಭದಲ್ಲಿ ನಾವಿದ್ದೇವೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಸ ನಾಯಕತ್ವ ಹುಟ್ಟಿಕೊಳ್ಳುತ್ತದೆ ಎಂಬ ಮಾತಿದೆ. ಈ ಬಗ್ಗೆ ಆಶಾಭಾವ ಇಟ್ಟುಕೊಳ್ಳಬೇಕಷ್ಟೇ.

ಎಸ್‌.ಜಿ.ಸಿದ್ಧರಾಮಯ್ಯ, ಸಾಹಿತಿ: ಕಾಂಗ್ರೆಸ್‌ ಪಕ್ಷವು ಯುವಜನರನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ದೇಶ ಈ ಪರಿಸ್ಥಿತಿಗೆ ಸಿಲುಕಿದೆ. ಬಿಜೆಪಿ ಹೊರತುಪಡಿಸಿದರೆ ಬೇರಾವುದೇ ಪಕ್ಷವು ಯುವಜನರ ಜೊತೆ ಬೆರೆಯುವ ಪ್ರಯತ್ನ ಮಾಡಲಿಲ್ಲ. ಎಡಪಂಥೀಯ ಪಕ್ಷಗಳೂ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೋಮುವಾದಿ ಪಕ್ಷದ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ಪಾರುಮಾಡಲು ಮತ್ತೆ ಯುವಜನರತ್ತ ಮುಖ ಮಾಡಬೇಕು.

ಸಿದ್ಧನಗೌಡ ಪಾಟೀಲ, ಸಿಪಿಐ ಮುಖಂಡ: ಕೋಮುವಾದಿ ಹಾಗೂ ಕಾರ್ಪೊರೇಟ್‌ ರಾಜಕೀಯ ವ್ಯವಸ್ಥೆಯನ್ನು ಮಟ್ಟ ಹಾಕುವ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಬೇಕಾದರೆ, ರಾಜಕಿಯ ಪಕ್ಷವಲ್ಲದ ವೇದಿಕೆಯ ಅಗತ್ಯವಿದೆ. ಧರ್ಮೀಯರು ಕೂಡಾ ಧರ್ಮಾಂಧರತ್ತ ವಾಲುವ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಕೋಮುವಾದ ಪ್ರೇರಿತ ಚಟುವಟಿಕೆಗಳಿಗೆ ಪ್ರತಿಕ್ರಿಯಿಸುವುದಕ್ಕಿಂತಲೂ ಹೆಚ್ಚಾಗಿ ಇತರ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನ ಕೇಂದ್ರೀಕರಿಸಬೇಕಿದೆ.

ದಿನೇಶ್‌ ಅಮಿನ್‌ಮಟ್ಟು, ಪತ್ರಕರ್ತ: ಕ್ರಿಮಿನಲ್‌ಗಳು ಹಣವಂತರು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮೂಲ ಕಾರಣ ಚುನಾವಣಾ ವ್ಯವಸ್ಥೆಯಲ್ಲಿ ಲೋಪ ಇರುವುದು. ಅದರ ಸುಧಾರಣೆ ಆಗದೆ ರಾಜಕೀಯ ವ್ಯವಸ್ಥೆ ಸುಧಾರಣೆ ಆಗದು. ಕಾನೂನಿನ ಮೇಲೆ ನಂಬಿಕೆ ಇಟ್ಟು ಈ ನಿಟ್ಟಿನಲ್ಲಿ ಪ್ರಯತ್ನ ಕೇಂದ್ರೀಕರಿಸಬೇಕು.

ವಿ.ಆರ್‌.ಸುದರ್ಶನ್‌, ಕಾಂಗ್ರೆಸ್‌ ಮುಖಂಡ; ಅನಾರೋಗ್ಯಕರ ಪೈಪೋಟಿಯನ್ನು ಎಲ್ಲ ಕ್ಷೇತ್ರಗಳಲ್ಲಿ ಕಾಣುತ್ತಿದ್ದೇವೆ. ಗೆದ್ದ ನಂತರ ಮಜಾ ಉಡಾಯಿಸುತ್ತೀರಿ ಜನರು ತಮ್ಮ ಮತಕ್ಕೆ ಮೌಲ್ಯವನ್ನು ನಿಗದಿಪಡಿಸುವ ಮಟ್ಟಕ್ಕೆ ವ್ಯವಸ್ಥೆ ಕುಸಿದಿದೆ. ಪ್ರಜಾಪ್ರಭುತ್ವ ಸಂಕ್ರಮಣ ಕಾಲಘಟ್ಟದಲ್ಲಿದೆ.

ಬಿ.ಟಿ.ಲಲಿತಾ ನಾಯ್ಕ್, ಲೇಖಕಿ: ಆಸೆ ಆಮಿಷಗಳಿಗೆ ಬಲಿಯಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೆ ಅವರನ್ನು ಸೋಲಿಸಲು ಎಲ್ಲರೂ ತಮ್ಮಿಂದಾದಷ್ಟು ಪ್ರಯತ್ನ ಮಾಡಬೇಕು.

ಮಾರುತಿ ಮಾನ್ಪಡೆ, ಪ್ರಾಂತ ರೈತಸಂಘದ ರಾಜ್ಯ ಘಟಕದ ಉಪಾಧ್ಯಕ್ಷ: ಕಾರ್ಪೊರೇಟ್‌ ಲೂಟಿಯಿಂದಾಗಿ ನಿರುದ್ಯೋಗ ಸೃಷ್ಟಿಯಾಗಿದೆ. ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಿದೆ.

ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಸಂವಾದ ನಡೆಸಿಕೊಟ್ಟರು.

ರಾಜೀನಾಮೆ ನೀಡುವಂತೆ ಕುಮಾರಸ್ವಾಮಿಗೆ ಹೇಳಿದ್ದೆ: ದತ್ತ

ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆ ಆದ ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬೇಕು. ಕಾಂಗ್ರೆಸ್‌ನವರು ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್‌ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದ್ದೆ. ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸ ಮುಗಿಸಿ ಹಿಂತಿರುಗಿದ ಬಳಿಕವೂ ಇದೇ ಮಾತನ್ನು ಪುನರುಚ್ಚರಿಸಿದ್ದೆ. ಪಕ್ಷದ ನಾಯಕರು ನನ್ನ ಸಲಹೆಯನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಕೊನೆಗೂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕಾದ ಪ್ರಮೇಯ ಸೃಷ್ಟಿಯಾಯಿತು ಎಂದು ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತ ಹೇಳಿದರು.

‘ಪ್ರಾದೇಶಿಕ ಪಕ್ಷಗಳು ಈಗ ಅತ್ಯಂತ ಕಟ್ಡ ಪರಿಸ್ಥಿತಿ ಎದುರಿಸುತ್ತಿವೆ. ರಾಜಕೀಯದಲ್ಲಿ ಜಾತಿ ಹಾಗೂ ಹಣ ಬಲದ ವಿರುದ್ಧ ಜನ ಜಾಗೃತಿ ಮೂಡಿಸದ ಹೊರತು ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.