ADVERTISEMENT

ವೈದ್ಯಕೀಯ–ದಂತ ವೈದ್ಯಕೀಯ ಸೀಟು ಶುಲ್ಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 19:55 IST
Last Updated 13 ನವೆಂಬರ್ 2020, 19:55 IST
ವೈದ್ಯಕೀಯ ಸೀಟು–ಪ್ರಾತಿನಿಧಿಕ ಚಿತ್ರ
ವೈದ್ಯಕೀಯ ಸೀಟು–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಶುಲ್ಕ ಶೇ 15 ರಷ್ಟು, ಆಡಳಿತ ಮಂಡಳಿ ಕೋಟಾ (ಖಾಸಗಿ ) ಸೀಟುಗಳ ಶುಲ್ಕ ಶೇ 25ರಷ್ಟು ಏರಿಸಲಾಗಿದೆ.

ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯೊಂದಿಗೆ ಈ ಕುರಿತ ಒಪ್ಪಂದಕ್ಕೆ ಸಹಿ ಮಾಡಿದ ನಂತರ, ರಾಜ್ಯಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ಈ ನಿರ್ಧಾರದ ಪರಿಣಾಮ, 2020–21ನೇ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳ ಶುಲ್ಕ ₹1,28,746, ಖಾಸಗಿ ಕೋಟಾದ ಸೀಟುಗಳ ಶುಲ್ಕ ₹9,81,956ಕ್ಕೆ ಏರಿದೆ. ದಂತ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕದ ಮೊತ್ತ ಕ್ರಮವಾಗಿ ₹83,356 ಹಾಗೂ ₹6,66,023ಕ್ಕೆ ಏರಿಸಲಾಗಿದೆ.

ಪೋಷಕರ ಅಸಮಾಧಾನ:

ADVERTISEMENT

‘ಸರ್ಕಾರವು ವಿದ್ಯಾರ್ಥಿ ವಿರೋಧಿ ಧೋರಣೆ ಅನುಸರಿಸುತ್ತಿದೆ. ಖಾಸಗಿ ಕಾಲೇಜುಗಳಲ್ಲಿ ಸರ್ಕಾರ ನಿಗದಿ ಪಡಿಸಿರುವ ಸರ್ಕಾರಿ ಕೋಟಾದ ಶುಲ್ಕವನ್ನು ಪಾವತಿಸಲು ನನ್ನ ಪೋಷಕರಿಗೆ ಕಷ್ಟವಾಗುತ್ತದೆ. ಅಂಥದ್ದರಲ್ಲಿ, ನಾನು ಸರ್ಕಾರಿ ಕೋಟಾದ ಅಡಿ ಸೀಟು ಪಡೆಯಲು ಸಾಧ್ಯವಾಗದಿದ್ದರೆ, ವೈದ್ಯಕೀಯ ಶಿಕ್ಷಣದ ಕನಸನ್ನೇ ಬಿಡಬೇಕಾಗುತ್ತದೆ’ ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

‘ರಾಜ್ಯದಲ್ಲಿನ ಬಹುತೇಕ ವೈದ್ಯಕೀಯ ಕಾಲೇಜುಗಳು ರಾಜಕಾರಣಿಗಳಿಗೆ ಸೇರಿವೆ. ಅಂತಹ ಕಾಲೇಜುಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರಬಹುದು’ ಎಂದು ಅವರು ದೂರಿದರು.

‘ಕೋವಿಡ್‌ ಸಂದರ್ಭದಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಕು ಎಂದು ಕಷ್ಟವಾದರೂ ಸರಿ ಓದಿಸಬೇಕು ಎಂದಿದ್ದೇವೆ. ಈ ಸಂದರ್ಭದಲ್ಲಿ ಶುಲ್ಕ ಏರಿಕೆ ಮಾಡಿದರೆ ಮತ್ತೆ ಸಾಲ ಮಾಡಬೇಕಾಗುತ್ತದೆ’ ಎಂದು ಪೋಷಕರೊಬ್ಬರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.