ADVERTISEMENT

ವೈದ್ಯಕೀಯ ಸೀಟು ಅಕ್ರಮಕ್ಕೆ ರಾಜಸ್ಥಾನ ವಿದ್ಯಾರ್ಥಿಗಳ ಬಳಕೆ?

ಸಿದ್ಧಾರ್ಥ, ದೇವರಾಜ ಅರಸು ಶಿಕ್ಷಣ ಸಂಸ್ಥೆಗಳೂ ಸೇರಿ ಎಂಟತ್ತು ಕಾಲೇಜುಗಳಲ್ಲಿ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 20:15 IST
Last Updated 13 ಅಕ್ಟೋಬರ್ 2019, 20:15 IST
   

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಮೂಲಕ ಹಂಚಿಕೆಯಾಗುತ್ತಿದ್ದ ವೈದ್ಯಕೀಯ ಸೀಟುಗಳನ್ನು ₹8ರಿಂದ ₹10 ಲಕ್ಷದವರೆಗೆ ಖರ್ಚು ಮಾಡಿ ಕಾಲೇಜು ಕೋಟಾಗೆ ಪರಿವರ್ತಿಸಿ, ₹50ರಿಂದ ₹65 ಲಕ್ಷದವರೆಗೆ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ಪರಮೇಶ್ವರ್‌ ಒಡೆತನದ ಸಿದ್ಧಾರ್ಥ ಶಿಕ್ಷಣ ಟ್ರಸ್ಟ್‌ ಹಾಗೂ ಆರ್‌.ಎಲ್‌. ಜಾಲಪ್ಪ ಒಡೆತನದ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮಾತ್ರವಲ್ಲದೆ, ರಾಜ್ಯದ 8–10 ವೈದ್ಯಕೀಯ ಕಾಲೇಜು ಗಳಲ್ಲಿ ಅಂತರರಾಜ್ಯ ಜಾಲ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎನ್ನಲಾಗಿದೆ. ಗುರುವಾರ ತುಮಕೂರಿನ ಸಿದ್ಧಾರ್ಥ ಶಿಕ್ಷಣ ಟ್ರಸ್ಟ್‌ ಹಾಗೂ ಕೋಲಾರದ ದೇವರಾಜ ಅರಸು ಶಿಕ್ಷಣ ಸಂಸ್ಥೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಸತತ ಮೂರು ದಿನ ವೈದ್ಯಕೀಯ ಪ್ರವೇಶ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಉಳಿದಿರುವ ಕಾಲೇಜುಗಳ ಮೇಲೂ ದಾಳಿ ನಡೆಯುವುದೇ ಎಂಬ ಅನುಮಾನ ಶೈಕ್ಷಣಿಕ ಮತ್ತು ರಾಜಕೀಯ ವಲಯದಲ್ಲಿ ಮೂಡಿದೆ.

ಈ ವೈದ್ಯಕೀಯ ಕಾಲೇಜುಗಳು ವಿವಿಧ ರಾಜಕೀಯ ಪಕ್ಷಗಳ ಮುಖಂಡ ರ ಹಿಡಿತದಲ್ಲಿರುವುದು ಶಂಕೆಗೆ ಕಾರಣ. ಆದರೆ, ಈ ಮೊದಲೇ ಐ.ಟಿ ಅಧಿಕಾರಿಗಳು ಒಂದೆರಡು ಕಾಲೇಜುಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಸಿದ್ಧಾರ್ಥ ಶಿಕ್ಷಣ ಟ್ರಸ್ಟ್‌ ಮಧ್ಯವರ್ತಿಗಳ ಸಹಾಯದಿಂದ ರಾಜಸ್ಥಾನದ ಕೋಟಾ ಎಂಬ ಪ್ರದೇಶದಿಂದ 150ರಿಂದ 300 ವಿದ್ಯಾರ್ಥಿಗಳನ್ನು ತಮ್ಮ ಅಕ್ರಮ ವ್ಯವಹಾರಕ್ಕೆ ಗೊತ್ತು ಮಾಡಿದ್ದರು. ಇವರಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು, ರೆಗ್ಯೂಲರ್ ವಿದ್ಯಾರ್ಥಿಗಳು ಇದ್ದರು.

ADVERTISEMENT

ಈ ವಿದ್ಯಾರ್ಥಿಗಳನ್ನು ಬಳಸಿಕೊಂಡು ಅಕ್ರಮ ಸೀಟು ಮಾರಾಟ ದಂಧೆ ನಡೆಸ ಲಾಗಿದೆ. ಐ.ಟಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ ಮಧ್ಯವರ್ತಿಗಳು ಸೀಟು ಮಾರಾಟಕ್ಕೆ ನೆರವಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಕೆಲವು ವಿದ್ಯಾರ್ಥಿಗಳನ್ನು ಪ್ರಕರಣದಲ್ಲಿ ಸಾಕ್ಷಿಗಳಾಗಿ ಪರಿವರ್ತಿಸಲಾಗಿದೆ. ಅಕ್ರಮ ಸೀಟು ವ್ಯವಹಾರಕ್ಕೆ ಸಂಬಂಧಿಸಿದಂತೆ ಪರಮೇಶ್ವರ ಹಾಗೂ ಅವರ ಸಂಬಂಧಿಕರಿಗೆ ಸೇರಿರುವ ₹ 109 ಕೋಟಿ ಅಘೋಷಿತ ಆಸ್ತಿಯನ್ನು ಐ.ಟಿ. ಪತ್ತೆ ಹಚ್ಚಿದೆ. ಸಂಸ್ಥೆಯ ನೌಕರರ ಹೆಸರಿನಲ್ಲಿದ್ದ ಬೇನಾಮಿ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಇದೇ 15ರಂದು ಮಂಗಳವಾರ ಪರಮೇಶ್ವರ ಹಾಗೂ ಜಾಲಪ್ಪನವರ ಸೋದರಳಿಯ ನಾಗರಾಜ್‌ ಅವರ ವಿಚಾರಣೆ ನಡೆಯಲಿದೆ.

ಸೀಟು ಹಂಚಿಕೆಯ ಲಾಬಿ

ಅಖಿಲ ಭಾರತ ನೀಟ್‌ ಪರೀಕ್ಷೆಯಲ್ಲಿ ಒಂದು ಲಕ್ಷದೊಳಗೆ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳನ್ನು ಮಧ್ಯವರ್ತಿಗಳು ಪತ್ತೆಹಚ್ಚಿ, ಅವರಿಗೆ ₹ 2ಲಕ್ಷ ಪಾವತಿ ಮಾಡುತ್ತಾರೆ.

ಈ ವಿದ್ಯಾರ್ಥಿಗಳು ಡೀಮ್ಡ್‌ ವಿಶ್ವವಿದ್ಯಾಲಯದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಾರೆ. ಮೊದಲ ಸುತ್ತಿನಲ್ಲಿ ಮೂಲ ದಾಖಲೆ ಪರಿಶೀಲನೆ ನಡೆಯುವುದಿಲ್ಲ. ಹೀಗಾಗಿ, ಕೌನ್ಸೆಲಿಂಗ್‌ಗೆ ಹಾಜರಾಗುವ ವಿದ್ಯಾರ್ಥಿ ತಮ್ಮ ನೀಟ್‌ ರ್‍ಯಾಂಕಿಂಗ್‌ ಸಂಖ್ಯೆ ನೀಡಿ ₹ 2 ಲಕ್ಷ ಶುಲ್ಕ ಪಾವತಿಸುತ್ತಾರೆ.

ಮೊದಲ ಸುತ್ತಿನಲ್ಲಿ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿ ಅಲ್ಲಿ ಪ್ರವೇಶ ಪಡೆಯುವುದಿಲ್ಲ. 2ನೇ ಸುತ್ತಿಗೆ ಸೀಟು ಲಭ್ಯವಿರುತ್ತದೆ. ಮೊದಲ ಸುತ್ತಿಗೆ ದಂಡ ಇರುವುದಿಲ್ಲ. ಎರಡನೇ ಸುತ್ತಿಗೂ ಅದೇ ಕಾಲೇಜನ್ನು ವಿದ್ಯಾರ್ಥಿ ಆಯ್ಕೆ ಮಾಡಿಕೊಂಡರೂ ಪ್ರವೇಶ ಪಡೆಯುವುದಿಲ್ಲ. ಇದರಿಂದಾಗಿ ಅಂತಿಮ ಸುತ್ತಿಗೂ ಈ ಸೀಟು ಲಭ್ಯ ಇರುತ್ತದೆ.ಆದರೆ, 2ನೇ ಸುತ್ತಿನಲ್ಲಿ ಪ್ರವೇಶ ಪಡೆಯದ ವಿದ್ಯಾರ್ಥಿ ₹ 2 ಲಕ್ಷ ದಂಡ ಕಟ್ಟಬೇಕು. ಈ ಹಣವನ್ನು ಕಾಲೇಜು ಆಡಳಿತ ಮಂಡಳಿ ಪರವಾಗಿ ಮಧ್ಯವರ್ತಿ ಪಾವತಿಸುತ್ತಾನೆ. ಅಂತಿಮ ಸುತ್ತಿನ ಕೌನ್ಸೆಲಿಂಗ್‌ಗೆ ಹಾಜರಾಗುವ ವಿದ್ಯಾರ್ಥಿ ಆಗಲೂ ಅದೇ ಕಾಲೇಜನ್ನು ಆಯ್ಕೆ ಮಾಡುತ್ತಾನಾದರೂ ಪ್ರವೇಶ ಪಡೆಯುವುದಿಲ್ಲ. ಹೀಗಾಗಿ, ಖಾಲಿ ಉಳಿಯುವ ಸೀಟು ಆಡಳಿತ ಮಂಡಳಿಗೆ ವಾಪಸ್‌ ಸಿಗುತ್ತದೆ. ಅದನ್ನು ಆಡಳಿತ ಮಂಡಳಿ ದುಬಾರಿ ಶುಲ್ಕಕ್ಕೆ ಮಾರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.