ಬೆಂಗಳೂರು: ಉಕ್ರೇನ್‌ನಲ್ಲಿ ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿರುವ ಹಾವೇರಿಯ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡರ ಅವರ ಮೃತದೇಹ ಇಂದು ನಸುಕಿನಲ್ಲಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು.
ದುಬೈನಿಂದ ಎಮಿರೇಟ್ಸ್ ಇಕೆ 568 ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ನಸುಕಿನಲ್ಲಿ ಮೃತದೇಹ ತರಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೃತದೇಹ ಮತ್ತು ನವೀನ್‌ಗೆ ಸಂಬಂಧಿಸಿದ ದಾಖಲೆಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಪೊಲೀಸ್ ಭದ್ರತೆಯಲ್ಲಿ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನು ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತಿದೆ.
ಇದನ್ನೂ ಓದಿ– ನವೀನ್ ಮೃತದೇಹ ಪತ್ತೆಗೆ ನೆರವಾದ ಸಿರಿಗೆರೆಶ್ರೀ
'ಕೇಂದ್ರ ಸರ್ಕಾರದ ಆಪರೇಷನ್ ಗಂಗಾ ಕಾರ್ಯಾಚರಣೆಯ ಮೂಲಕ ಕರ್ನಾಟಕದ 572 ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕರೆತರಲಾಗಿದೆ. ನವೀನ್ ಮೃತ ದೇಹ ಇರಿಸಲಾಗಿದ್ದ ಶವಾಗಾರದ ಸಮೀಪದಲ್ಲೇ ದಾಳಿ ನಡೆದಿದ್ದರಿಂದ ಮೃತದೇಹ ತರುವ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು' ಎಂದು ಮುಖ್ಯಮಂತ್ರಿ ತಿಳಿಸಿದರು.
'ನವೀನ್ ಪಾರ್ಥಿವ ಶರೀರಕ್ಕೆ ವೀರಶೈವ ಪದ್ಧತಿ ಪ್ರಕಾರ ಪೂಜಾ ಕಾರ್ಯ ನೆರವೇರಿಸಲಾಗುತ್ತದೆ. ಸಂಜೆವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ಮಗನ ಮೃತದೇಹವನ್ನು ದಾನ ಮಾಡುತ್ತೇವೆ' ಎಂದು ಮೃತ ನವೀನ ಗ್ಯಾನಗೌಡರ ತಂದೆ ಶೇಖರಪ್ಪ ಗ್ಯಾನಗೌಡರ ಈ ಹಿಂದೆ ತಿಳಿಸಿದ್ದರು.
ಮಾರ್ಚ್ 1 ರಂದು ಉಕ್ರೇನ್‌ನ ಹಾರ್ಕಿವ್‌ನಲ್ಲಿ ಸಂಭವಿಸಿದ ದಾಳಿಯಲ್ಲಿ ನವೀನ್ ಮೃತಪಟ್ಟಿದ್ದರು. ಮೃತ ಯುವಕ ನಾಲ್ಕನೇ ವರ್ಷದ ವೈದ್ಯಕೀಯ ಕೋರ್ಸ್ ಓದುತ್ತಿದ್ದರು. ಒಂದು ವಾರ ಕಾಲ ಬಂಕರ್‌ನಲ್ಲಿ ಇದ್ದ ಅವರು ಹೊರಗೆ ಬಂದಾಗ ಕ್ಷಿಪಣಿ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಿಗ್ಗೆ 9 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ಹೋಗಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಚಳಗೇರಿ ಗ್ರಾಮಕ್ಕೆ ತೆರಳಲಿದ್ದಾರೆ. ನವೀನ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನಷ್ಟು ಓದು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.