ಬೆಂಗಳೂರು: ‘ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿತ್ಯ 10 ನಿಮಿಷ ಧ್ಯಾನ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಟಿಪ್ಪಣಿ ಕಳುಹಿಸಿರುವುದಕ್ಕೆ ತೀವ್ರ ಆಕ್ಷೇಪ
ವ್ಯಕ್ತವಾಗಿದೆ.
‘ವಿದ್ಯಾರ್ಥಿಗಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಧ್ಯಾನ ಮಾಡಿಸುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ, ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಲು ಸಹಕಾರಿಯಾಗುತ್ತದೆ. ಈಗಾಗಲೇ ಕೆಲವು ಶಾಲೆಗಳಲ್ಲಿ ಧ್ಯಾನ ಮಾಡಿಸಲಾಗುತ್ತಿದೆ. ಎಲ್ಲ ಶಾಲೆಗಳಲ್ಲೂ ಇದನ್ನು ಅಳವಡಿಸಲು ಅವಕಾಶ ಕಲ್ಪಿಸುವಂತೆ ರಾಜ್ಯ ಪ್ರಾಥಮಿಕ ಶಿಕ್ಷಣ ಸಂಘ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಸಮಯ ನಿಗದಿಪಡಿಸಬೇಕು’ ಎಂದೂ ಟಿಪ್ಪಣಿಯಲ್ಲಿ ಸಚಿವರು ಉಲ್ಲೇಖಿಸಿದ್ದಾರೆ.
ಸಿದ್ದರಾಮಯ್ಯ ಟೀಕೆ:‘ಕೋವಿಡ್ ಅನ್ನು ಸರಿಯಾಗಿ ನಿಯಂತ್ರಿಸಲಾಗದೆ ಶಾಲೆಗಳನ್ನು ಮುಚ್ಚಿ, ಆನ್‌ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮೊಬೈಲ್ ಹುಚ್ಚು ಹಚ್ಚಿಸಿರುವ ಬಿಜೆಪಿ ಸರ್ಕಾರ, ಈಗ ಆ ಹುಚ್ಚು ಬಿಡಿಸಲು ಧ್ಯಾನ ನಡೆಸಲು ಮುಂದಾಗಿರುವುದು ಹುಚ್ಚುತನವಲ್ಲದೆ ಮತ್ತೇನು?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ‘ಯೋಗ-ಧ್ಯಾನ ಯಾವುದಕ್ಕೂ ನನ್ನ ವಿರೋಧ ಇಲ್ಲ. ಆದರೆ, ಶಾಲೆಗಳಲ್ಲಿ ಯಾವುದು ಮುಖ್ಯ. ಶಿಕ್ಷಣ ಸಚಿವ ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವುದಷ್ಟೇ ಪ್ರಶ್ನೆ’ ಎಂದಿದ್ದಾರೆ.
‘ಎಳೆಯ ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕಿ ಬಲವಂತವಾಗಿ ಯೋಗ- ಧ್ಯಾನಗಳ ಕಸರತ್ತು ಮಾಡಿಸಿದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಇನ್ನಷ್ಟು ಕುಗ್ಗಿ ಹೋಗುತ್ತಾರೆ. ಮೊದಲು ಅಗತ್ಯ ಸಂಖ್ಯೆಯಲ್ಲಿ ಶಿಕ್ಷಕರನ್ನು ನೇಮಿಸಿ ಅವಶ್ಯಕವಾದ ಬೋಧನಾ ಸಲಕರಣೆಗಳನ್ನು ಸರ್ಕಾರ ಒದಗಿಸಬೇಕು. ಶಾಲೆಗಳಲ್ಲಿ ಕಲೆ, ಸಂಗೀತ ಮತ್ತು ಕ್ರೀಡೆಗಳಲ್ಲಿ ತರಬೇತಿ ನೀಡುವ ಶಿಕ್ಷಕರನ್ನು ನೇಮಿಸಬೇಕು. ಅದನ್ನು ಬಿಟ್ಟು ರಾಜಕೀಯ ಕಾರ್ಯಸೂಚಿಗಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟ ಆಡಬಾರದು’ ಎಂದೂ ಹೇಳಿದ್ದಾರೆ.
‘ಸಚಿವರ ನಡೆ ಕಾನೂನುಬಾಹಿರ’
‘ಸಾಂವಿಧಾನಿಕವಾಗಿ ಮತ್ತು ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಸಮಾನತೆ ನೆಲೆಯಲ್ಲಿ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವುದನ್ನು ಬಿಟ್ಟು ಶಿಕ್ಷಣ ಸಚಿವರು ಏಕಪಕ್ಷೀಯ ತೀರ್ಮಾನಗಳಿಂದ ದಿನಕ್ಕೊಂದು ಹೊಸ ಬಗೆಯ ವಿವಾದಗಳನ್ನು ಹುಟ್ಟು ಹಾಕುತ್ತಿದ್ದಾರೆ. ಜಾತ್ಯತೀತ, ವೈಜ್ಞಾನಿಕ ನೆಲೆಯಲ್ಲಿ ಆಧುನಿಕ ಶಿಕ್ಷಣ ನೀಡುವ ಬದಲು, ಶಾಲಾ ಶಿಕ್ಷಣವನ್ನು ಅಸ್ತವ್ಯಸ್ತಗೊಳಿಸಲು ಪಣ ತೊಟ್ಟಂತೆ ವರ್ತಿಸುತ್ತಿದ್ದಾರೆ’ ಎಂದು ಲೇಖಕರು, ಸಾಹಿತಿಗಳು ಜಂಟಿ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿ.ಪಿ. ನಿರಂಜನಾರಾಧ್ಯ, ಎಸ್.ಜಿ. ಸಿದ್ದರಾಮಯ್ಯ, ವಿಜಯಮ್ಮ, ಕಾಳೇಗೌಡ ನಾಗವಾರ, ಹಿ.ಶಿ. ರಾಮಚಂದ್ರೇಗೌಡ, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಪಿ.ವಿ. ಭಂಡಾರಿ, ಡಾ. ಯೋಗಾನಂದ ರೆಡ್ಡಿ ಈ ಹೇಳಿಕೆ ನೀಡಿದ್ದಾರೆ.
‘ಇಲಾಖೆ ಸೂಚಿಸದೇ ಇರುವ ಧ್ಯಾನ ಇತ್ಯಾದಿಗಳನ್ನು ಶಾಲೆಗಳಲ್ಲಿ ನಡೆಸುವುದಕ್ಕೆ ಶಿಕ್ಷಕರ ಸಂಘಕ್ಕೆ ಅಧಿಕಾರ ಇಲ್ಲ. ಅವು ಈಗಾಗಲೇ ಹಾಗೆ ಮಾಡಿರುವುದು ನ್ಯಾಯಬಾಹಿರ. ಅದನ್ನು ಸಮರ್ಥಿಸಿ, ವಿಸ್ತರಿಸಲು ಹೇಳುತ್ತಿರುವ ಸಚಿವರ ನಡೆ ವಿಷಾದನೀಯವೂ, ಆಘಾತಕಾರಿಯೂ ಆಗಿದೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸಚಿವರ ನಡೆಯನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ. ಸರ್ಕಾರಿ ಶಾಲೆಗಳನ್ನು ಸರಸ್ವತಿ ಶಿಶು ಮಂದಿರಗಳನ್ನಾಗಿ ಸಲು ಸಚಿವರು ಹುನ್ನಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಈ ಸರ್ಕಾರ ಸಂವೇದನಾರಹಿತವೂ, ಅವೈಜ್ಞಾನಿಕವೂ ಆಗಿದೆ ಎನ್ನುವುದಕ್ಕೆ
ಈ ಟಿಪ್ಪಣಿ ಸ್ಪಷ್ಟ ಪುರಾವೆ. ಕೋವಿಡ್ ಸಮಯದಲ್ಲಿ ಸುಮಾರು ಎರಡು ವರ್ಷ ಶಾಲೆಗಳನ್ನು ಮುಚ್ಚಿ, ಮಕ್ಕಳನ್ನು ಕಲಿಕೆಯಿಂದ ವಂಚಿತರಾಗಿಸಿ, ಆನ್‌ಲೈನ್ ಶಿಕ್ಷಣದ ನೆಪದಲ್ಲಿ ಮೊಬೈಲ್ ಸಾಧನಗಳ ದಾಸ್ಯಕ್ಕೆ ತಳ್ಳಿದ ಸರ್ಕಾರ, ಈಗ ಅದಕ್ಕೆ ಪರಿಹಾರವಾಗಿ ಧ್ಯಾನ ಮಾಡಬೇಕೆಂದು ಸುತ್ತೋಲೆ ಹೊರಡಿಸುತ್ತಿರುವುದು ಇನ್ನೂ ದೊಡ್ಡ ಅಪಚಾರ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.