ADVERTISEMENT

ಮೇಕೆದಾಟು: ‘ಪರಿಸರ’ ಅಡ್ಡಿ ನಿವಾರಣೆಗೆ ಮತ್ತೆ ಕಸರತ್ತು

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 14:15 IST
Last Updated 6 ಜುಲೈ 2024, 14:15 IST
<div class="paragraphs"><p>ಮೇಕೆದಾಟು</p></div>

ಮೇಕೆದಾಟು

   

ನವದೆಹಲಿ: ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸುವ ಯೋಜನೆಗೆ ಪರಿಸರ ಅನುಮೋದನೆ ಪಡೆಯಲು ಮತ್ತೆ ಪ್ರಯತ್ನ ಆರಂಭಿಸಿರುವ ಕರ್ನಾಟಕ ಸರ್ಕಾರವು ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಹೊಸ ಪ್ರಸ್ತಾವ ಸಲ್ಲಿಸಿದೆ.

ಯಾವುದೇ ಯೋಜನೆಗೆ ಪರಿಸರ ಅನುಮೋದನೆ ಕೋರುವ ಸಂದರ್ಭದಲ್ಲಿ ಕಾರ್ಯಸೂಚಿಗೆ (ಟಿಒಆರ್‌) ಒಪ್ಪಿಗೆ ಪಡೆಯುವುದು ಅತ್ಯಗತ್ಯ ಪ್ರಕ್ರಿಯೆ. ಕಾರ್ಯಸೂಚಿಗೆ (ಟಿಒಆರ್‌) ಒಪ್ಪಿಗೆ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಸಚಿವಾಲಯಕ್ಕೆ 2019ರ ಜೂನ್‌ನಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಸಚಿವಾಲಯವು 2022ರ ಸೆಪ್ಟೆಂಬರ್‌ನಲ್ಲಿ ಪರಿವೇಷ್‌ ಪೋರ್ಟಲ್‌ನಿಂದ ಪ್ರಸ್ತಾವವನ್ನು ‘ಡಿ ಲಿಸ್ಟ್‌’ (ತೆಗೆದುಹಾಕು) ಮಾಡಿತ್ತು. 

ADVERTISEMENT

‘ಈ ಯೋಜನೆಯು ಅಂತರ್‌ ರಾಜ್ಯ ಜಲ ವಿವಾದವನ್ನು ಒಳಗೊಂಡಿದೆ. ಹೀಗಾಗಿ, ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಒಪ್ಪಿಗೆ ಸಿಕ್ಕ ಬಳಿಕ ಹಾಗೂ ಜಲಶಕ್ತಿ ಸಚಿವಾಲಯವು ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಒಪ್ಪಿಗೆ ನೀಡಿದ ನಂತರವಷ್ಟೇ ಟಿಒಆರ್‌ಗೆ ಒಪ್ಪಿಗೆ ನೀಡಲಾಗುವುದು’ ಎಂದು ಪರಿಸರ ಸಚಿವಾಲಯ ಸ್ಪಷ್ಟಪಡಿಸಿತ್ತು. ಎರಡು ವರ್ಷಗಳ ನಂತರ ರಾಜ್ಯವು ಮತ್ತೊಂದು ಪ್ರಯತ್ನ ಆರಂಭಿಸಿದೆ.

‌ಈ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ 4,716 ಹೆಕ್ಟೇರ್ ಅರಣ್ಯ ಮುಳುಗಡೆಯಾಗಲಿದೆ. ಯೋಜನೆಯ ಕಾಮಗಾರಿಗೆ ಚಾಲನೆ ನೀಡುವ ಮುನ್ನ ಪರಿಸರದ ಜತೆಗೆ ಅರಣ್ಯ ಹಾಗೂ ವನ್ಯಜೀವಿ ಅನುಮೋದನೆಯನ್ನೂ ಪಡೆಯಬೇಕಿದೆ. ಪರಿಸರ ಅನುಮೋದನೆಯನ್ನಷ್ಟೇ ಪಡೆದು ಕಾಮಗಾರಿಗೆ ಚಾಲನೆ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ 2011ರಲ್ಲಿ ನಿರ್ದೇಶನ ನೀಡಿದೆ. ಜತೆಗೆ, ಅರಣ್ಯದ ಹೊರಭಾಗದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಳಿಕ ಪರಿಸರ ಅನುಮೋದನೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದೂ ತಾಕೀತು ಮಾಡಿದೆ. 

ರಾಜ್ಯದಿಂದ ಮತ್ತೆ ಪತ್ರ: 

₹9,000 ಕೋಟಿ ಮೊತ್ತದ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2019ರ ಜನವರಿ) ರಾಜ್ಯ ಸರ್ಕಾರವು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು. ಈ ಪ್ರಸ್ತಾವದ ಬಗ್ಗೆ ಸಮಗ್ರ ಚರ್ಚೆ ನಡೆಸಿ ಅಭಿಪ್ರಾಯ ನೀಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಆಯೋಗ ಸೂಚಿಸಿತ್ತು. ಆದರೆ, ಪ್ರಾಧಿಕಾರವು ಐದು ವರ್ಷಗಳ ವರೆಗೆ ಚರ್ಚೆ ನಡೆಸಿರಲಿಲ್ಲ.

2024ರ ಫೆಬ್ರುವರಿ 2ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಡಿಪಿಆರ್ ಕುರಿತು ಚರ್ಚಿಸಲಾಯಿತು. ಜತೆಗೆ, ಯೋಜನೆಯ ವಿವಿಧ ಆರ್ಥಿಕ ಹಾಗೂ ತಾಂತ್ರಿಕ ಅಂಶಗಳ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಪ್ರಾಧಿಕಾರವು ಪ್ರಸ್ತಾವವನ್ನು ಆಯೋಗಕ್ಕೆ ವಾಪಸ್‌ ಕಳುಹಿಸಿದೆ. ಡಿಪಿಆರ್ ಪರಾಮರ್ಶೆ ನಡೆಸಿ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ಕೇಂದ್ರ ಜಲ ಆಯೋಗಕ್ಕೆ ರಾಜ್ಯ ಸರ್ಕಾರವು ಏಪ್ರಿಲ್‌ 30ರಂದು ಪತ್ರ ಬರೆದಿದೆ. ಆಯೋಗದ ಅಧ್ಯಕ್ಷರಿಗೆ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಜೂನ್‌ 19ರಂದು ಮತ್ತೊಮ್ಮೆ ಪತ್ರ ಬರೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.