ADVERTISEMENT

ಮೇಕೆದಾಟು ಯೋಜನೆ: ತಮಿಳುನಾಡು ಜತೆ ಚರ್ಚೆಗೆ ಸಿದ್ಧ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 0:04 IST
Last Updated 30 ಜುಲೈ 2024, 0:04 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಸರ್ಕಾರದ ಜತೆ ಚರ್ಚೆಗೆ ಸಿದ್ಧವಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಮೆಟ್ಟೂರು ಅಣೆಕಟ್ಟು ತುಂಬಿ ನೀರು ವ್ಯರ್ಥವಾಗುತ್ತಿದ್ದು, ಈ ಬಗ್ಗೆ ತಮಿಳುನಾಡು ಸರ್ಕಾರದೊಂದಿಗೆ ನಾವು ಮಾತನಾಡಲು ತಯಾರಿದ್ದೇವೆ. ಮೇಕೆದಾಟು ಯೋಜನೆಯಿಂದ ಅವರಿಗೆ ತೊಂದರೆ ಆಗದಿದ್ದರೂ ಮಾತನಾಡಲು ಅವರು ತಯಾರಿಲ್ಲ. ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟರೆ ನಾವು ನಿರ್ಮಾಣ ಮಾಡಲು ಸಿದ್ಧವಿದ್ದೇವೆ’ ಎಂದು ಹೇಳಿದರು.

ಬಾಂಗ್ಲಾ ದೇಶದಿಂದ 20ಸಾವಿರ ಜನ ಬೆಂಗಳೂರಿಗೆ ವಲಸೆ ಬಂದಿದ್ದಾರೆ ಎನ್ನಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಆ ಬಗ್ಗೆ ತಿಳಿದಿಲ್ಲ, ವಿಚಾರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಸರ್ಕಾರ ಹಾಗೂ ಪಕ್ಷದ ಬಗ್ಗೆ ಚರ್ಚೆ ಮಾಡಲು ವರಿಷ್ಠರು ಕರೆದಿದ್ದಾರೆ. ಹೀಗಾಗಿ ನಾನು ಮತ್ತು ಉಪಮುಖ್ಯಮಂತ್ರಿ ಮಂಗಳವಾರ ನವದೆಹಲಿಗೆ ಭೇಟಿ ನೀಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್ ಅವರು ಕೈಗಾರಿಕೆಗಳೆಲ್ಲಾ ಬೇರೆ ರಾಜ್ಯಕ್ಕೆ ಹೋಗುತ್ತಿವೆ ಎಂದು ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹಣಕಾಸು ಸಚಿವರ ನೀತಿ– ಕಾರ್ಯಕ್ರಮಗಳಿಂದ ದೇಶಕ್ಕೆ ಬರುತ್ತಿದ್ದ ಶೇ 31ರಷ್ಟು ಎಫ್.ಡಿ.ಐ ಕಡಿಮೆಯಾಗಿದೆ’ ಎಂದು ದೂರಿದರು. 

‘ಇವರ ತಪ್ಪುಗಳಿಗೆ ಇಂದು ದೇಶದಲ್ಲಿ ಹೂಡಿಕೆಯಾಗುತ್ತಿಲ್ಲ. ನಾವು ಸಾಲ ಹೆಚ್ಚು ಮಾಡಿದ್ದೇವೆ ಎನ್ನುತ್ತಾರೆ. ನಾವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ಜಿಡಿಪಿಯ ಶೇ 25ರೊಳಗಡೆಯೇ ಇದ್ದೇವೆ. ಅವರು ₹ 15 ಲಕ್ಷ ಕೋಟಿ ಸಾಲ ಮಾಡಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.