ADVERTISEMENT

ನೆಚ್ಚಿನ ನಟ ಪುನೀತ್ ರಾಜ್​ಕುಮಾರ್ ನೆನಪಿನಲ್ಲಿ ’ಸ್ಫೂರ್ತಿ ಹಬ್ಬ’

ಪುನೀತ್ ಸಮಾಧಿ ಬಳಿ ಜನಸಾಗರ* ಅಭಿಮಾನಿಗಳಿಗೆ ಊಟ ಬಡಿಸಿದ ಪುತ್ರಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 23:30 IST
Last Updated 17 ಮಾರ್ಚ್ 2024, 23:30 IST
ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಪುನೀತ್ ಸಮಾಧಿ ಬಳಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು 
ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಪುನೀತ್ ಸಮಾಧಿ ಬಳಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು    

ಬೆಂಗಳೂರು: ದಿವಂಗತ ನಟ ಪುನೀತ್ ರಾಜ್​ಕುಮಾರ್ ಅವರ 49ನೇ ಜನ್ಮದಿನದ ಪ್ರಯುಕ್ತ ಭಾನುವಾರ ನಗರದಾದ್ಯಂತ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. 

ಕೆಲವೆಡೆ ರಕ್ತದಾನ, ನೇತ್ರದಾನದಂತಹ ಶಿಬಿರಗಳು ನಡೆದವು. ಅಭಿಮಾನಿಗಳು ಸಂಗೀತ ರಸಮಂಜರಿ‌ ಕಾರ್ಯಕ್ರಮ‌ ಹಮ್ಮಿಕೊಂಡಿದ್ದರು.‌ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರು ಅಭಿನಯಿಸಿರುವ ಚಿತ್ರದ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಕೆಲವೆಡೆ ಕೇಕ್ ಕತ್ತರಿಸಿ, ಉಪಾಹಾರ ಹಂಚಿ ಜನ್ಮದಿನ ಸಂಭ್ರಮಿಸಲಾಯಿತು.

ರಾಘವೇಂದ್ರ ರಾಜ್​ಕುಮಾರ್, ಅವರ ಸಹೋದರಿ ಪೂರ್ಣಿಮಾ ಮತ್ತು ಕುಟುಂಬದ ಸದಸ್ಯರೊಂದಿಗೆ ಪುನೀತ್ ಪುತ್ರಿ ವಂದಿತಾ ಕಂಠೀರವ ಸ್ಟುಡಿಯೊದಲ್ಲಿನ ಪುನೀತ್ ರಾಜ್​ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು. ಶನಿವಾರ ರಾತ್ರಿಯಿಂದಲೇ ಪುನೀತ್‌ ಸಮಾಧಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಭಾನುವಾರ ಬೆಳಗಿನಿಂದಲೇ ಸಾವಿರಾರು ಅಭಿಮಾನಿಗಳು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದರು. ಸಮಾಧಿ ದರ್ಶನಕ್ಕೆ ಬಂದಿದ್ದ ಅಭಿಮಾನಿಗಳಿಗೆ ರಾಜ್‌ಕುಮಾರ್‌ ಕುಟುಂಬದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ವಂದಿತಾ, ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರರಾದ ವಿನಯ್ ರಾಜ್​ಕುಮಾರ್ ಹಾಗೂ ಯುವ ರಾಜ್​ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸಿದರು. 

ಸಮಾಧಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ನಟ ರಾಘವೇಂದ್ರ ರಾಜ್‌ಕುಮಾರ್, ‘ಅಪ್ಪು ಜನ್ಮದಿನ ಇಂದು ಸ್ಫೂರ್ತಿ ದಿನವಾಗಿದೆ. ಅಪ್ಪಾಜಿಯನ್ನು ದೇವರಾಗಿಸಿದ ಅಭಿಮಾನಿಗಳು ಅಪ್ಪುವನ್ನೂ ದೇವರಾಗಿಸಿದ್ದಾರೆ. ಅಪ್ಪು ನೆನಪಿಗೆ ಏನಾದರೂ ಉತ್ತಮ‌ ಕೆಲಸ ಮಾಡಿ. ಆದರೆ, ಒಂದು ಭಾಗವನ್ನು ದಾನ, ಧರ್ಮಕ್ಕೆ ತೆಗೆದಿಡಿ. ಅಪ್ಪು ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ’ ಎಂದು ಹೇಳಿದರು.

ಶಿವರಾಜ್‌ಕುಮಾರ್, ‘ಅಪ್ಪು ಆಗಿ ಬಂದ ನೀನು ಪುನೀತನಾಗಿ ಎಲ್ಲರ ಮನದಲ್ಲೂ ಭದ್ರವಾಗಿ ಉಳಿದುಬಿಟ್ಟೆ. ಜನ ನಿನ್ನಲ್ಲಿ ದೇವರನ್ನು ಕಾಣುತ್ತಾರೆ. ಎಷ್ಟೋ ಜನರಿಗೆ ಮಾರ್ಗದರ್ಶಿ ನೀನು, ಕೋಟಿ ಅಭಿಮಾನಿಗಳ ಪವರ್ ಸ್ಟಾರ್. ಆದರೆ, ನನೆಗ ಎಂದಿಗೂ ಪುಟ್ಟ ತಮ್ಮ, ಕೈ ಹಿಡಿದು ನಡೆದ ತಮ್ಮ, ನಿನ್ನ ನಗುವಿನಲ್ಲಿ ನನ್ನ ಸಂತೋಷ ಹುಡುಕಿಕೊಟ್ಟ ತಮ್ಮ, ನನ್ನ ಮನಸಲ್ಲೇ ಸದಾ ರಾಜನಂತೆ ಬಾಳುವ ತಮ್ಮ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಭಿಮಾನಿಗಳು ಪುನೀತ್‌ ಅವರ ಈ ಸಲದ ಹುಟ್ಟುಹಬ್ಬವನ್ನು ‘ಸ್ಫೂರ್ತಿಯ ಹಬ್ಬ’ವನ್ನಾಗಿ ಆಚರಿಸಿದರು. ಪುನೀತ್‌ ಸಿನಿಮಾದ ಹಾಡುಗಳು ಸ್ಮಾರಕದ ಬಳಿ ಕೇಳಿಬಂದವು. ಜೊತೆಗೆ ಅಭಿಮಾನಿಗಳು ಸ್ಮಾರಕದ ಬಳಿಯೇ ರಕ್ತದಾನ, ನೇತ್ರದಾನ ಶಿಬಿರಗಳನ್ನು ನಡೆಸಿದರು. ಜನ ದಟ್ಟಣೆಯಿಂದಾಗಿ ಪುನೀತ್ ರಾಜ್​ಕುಮಾರ್ ಸ್ಮಾರಕದ ಬಳಿ ಬಿಗಿಭದ್ರತೆ ಒದಗಿಸಲಾಗಿತ್ತು. 

ಪುನೀತ್ ಸಮಾಧಿ ದರ್ಶನಕ್ಕಾಗಿ ಸರತಿಯಲ್ಲಿ ನಿಂತಿರುವ ಅಭಿಮಾನಿಗಳು
ಪುನೀತ್ ಸಮಾಧಿ ಎದುರು ಅಭಿಮಾನಿಗಳ ಸಾಗರ
ಪುನೀತ್ ಸಮಾಧಿ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿರುವ ಅಭಿಮಾನಿಗಳು
ಅಶ್ವಿನಿ – ಪುನೀತ್ ರಾಜ್‌ಕುಮಾರ್ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುತ್ತಿರುವ ಅಭಿಮಾನಿಗಳು
ಅಶ್ವಿನಿ – ಪುನೀತ್ ರಾಜ್‌ಕುಮಾರ್ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುತ್ತಿರುವ ಅಭಿಮಾನಿಗಳು

‘ಜಾಕಿ’ ಸಿನಿಮಾ ಮರುಬಿಡುಗಡೆ ಪುನೀತ್ ರಾಜ್‌‌ಕುಮಾರ್ ಭಾವನಾ ಜೋಡಿಯಾಗಿ ನಟಿಸಿರುವ 'ಜಾಕಿ' ಚಿತ್ರವನ್ನು ಮಾ.15 ರಂದು ಕೆಆರ್‌ಜಿ ಸ್ಟುಡಿಯೋ ಮರು ಬಿಡುಗಡೆ ಮಾಡಿತ್ತು. ಪುನೀತ್ ಜನ್ಮದಿನದ ಬೆನ್ನಲ್ಲೇ ಅವರ ಅಭಿಮಾನಿಗಳು ಚಿತ್ರ ವೀಕ್ಷಿಸಿ ಭಾವುಕರಾದರು. ಕೆಲ ಚಿತ್ರಮಂದಿರಗಳಲ್ಲಿ ದುನಿಯಾ ಸೂರಿ ನಿರ್ದೇಶನದ ಈ ಚಿತ್ರ ತುಂಬಿದ ಪ್ರದರ್ಶನ ಕಂಡಿತು. ಮುಂದಿನ ವರ್ಷದ ಜನ್ಮದಿನಕ್ಕೆ ‘ಅಪ್ಪು’ ಸಿನಿಮಾ ಮರುಬಿಡುಗಡೆ ಮಾಡುವುದಾಗಿ ಕೆಆರ್‌ಜಿ ಸ್ಟುಡಿಯೊ ಹೇಳಿದೆ.

‘ಎಂದೆಂದಿಗೂ ಹೃದಯದಲ್ಲಿ’ ಕಾರಣಾಂತರಗಳಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪುನೀತ್‌ ಪತ್ನಿ ಅಶ್ವಿನಿ ಅವರಿಗೆ ಸಾಧ್ಯವಾಗಲಿಲ್ಲ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪುನೀತ್‌ ಕುರಿತು ಸಂದೇಶ ಹಂಚಿಕೊಂಡಿದ್ದಾರೆ. ‘ಅಪ್ಪು ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ...ಅವರು ಎಂದೆಂದಿಗೂ ನಮ್ಮ ಹೃದಯಲ್ಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.