ADVERTISEMENT

ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ| ಶಿಫಾರಸು; ಪರಿಶೀಲಿಸಿ ಕ್ರಮ: ಲಾಡ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 15:24 IST
Last Updated 21 ಸೆಪ್ಟೆಂಬರ್ 2024, 15:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ (ಪಿಎಂಎಲ್‌) ನೀಡಲು ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ನಾ ಎಸ್‌ ಅವರ ಅಧ್ಯಕ್ಷತೆಯ 18 ಸದಸ್ಯರ ಸಮಿತಿ ಶಿಫಾರಸು ಮಾಡಿದೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ‘ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಹೇಗೆ ವಿವಿಧ ಶಾರೀರಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಉದ್ಯೋಗಸ್ಥ ಮಹಿಳೆಯರು ಅನುಭವಿಸುವ ಸಂಕಷ್ಟ, ಸವಾಲುಗಳು, ಕೆಲಸ ಮಾಡುವ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಅನುಸರಿಸಬೇಕಾದ ನಿಯಮಗಳು, ವಿಶ್ರಾಂತಿಯ ಅಗತ್ಯತೆ ಕುರಿತು ಸಮಿತಿಯ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದರು.

‘ಮುಟ್ಟಿನ ರಜೆ ನೀತಿ ಈಗಾಗಲೇ ಬಿಹಾರ, ಕೇರಳ ಮತ್ತು ಒಡಿಶಾದಲ್ಲಿದೆ. ಆ ರಾಜ್ಯಗಳು ಅನುಸರಿಸುತ್ತಿರುವ ನೀತಿಗಳೂ ಸೇರಿದಂತೆ ಮಹಿಳಾಸ್ನೇಹಿ ನಿಯಮ ರೂಪಿಸಲು ಅಗತ್ಯವಾದ ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುವುದು. ಸಮಿತಿಯು ವರ್ಷಕ್ಕೆ ಆರು ವೇತನಸಹಿತ ಹಾಗೂ ಆರು ವೇತನರಹಿತ ರಜೆ ನೀಡಲು ಶಿಫಾರಸು ಮಾಡಿದೆ. ತಿಂಗಳಿಗೆ ಒಂದು ಅಥವಾ ವರ್ಷಕ್ಕೆ ಆರು ರಜೆ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ವಿವಿಧ ಸಂಘಟನೆಗಳು, ವಲಯಗಳ ಅಭಿಪ್ರಾಯ ಸಂಗ್ರಹಿಸುವ ಜತೆಗೆ, ಸರ್ಕಾರದ ಎಲ್ಲ ಇಲಾಖೆಗಳು ಹಾಗೂ ಖಾಸಗಿ ಕಂಪನಿ, ಕೈಗಾರಿಕೆಗಳ ಜತೆಗೂ ಮಾತುಕತೆ ನಡೆಸಲಾಗುವುದು. ರಜೆ ನೀಡುವಿಕೆಯಿಂದ ಗಾರ್ಮೆಂಟ್ಸ್‌ ಸೇರಿದಂತೆ ಮಹಿಳಾ ಅವಲಂಬಿತ ಉದ್ಯಮಗಳ ಮೇಲಾಗುವ ಸಾಧಕ–ಬಾಧಕಗಳ ಕುರಿತು ಪರಿಶೀಲಿಸಲಾಗುವುದು. ಎಲ್ಲರ ಅಭಿಪ್ರಾಯ ಕಲೆಹಾಕಿ, ಸಿದ್ಧತೆ ಪೂರ್ಣಗೊಂಡ ನಂತರ ಆರ್ಥಿಕ ಇಲಾಖೆಯ ಒಪ್ಪಿಗೆಗೆ ಕಳುಹಿಸಲಾಗುವುದು’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.