ADVERTISEMENT

ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಮರಣ ಕಾರಣ ನಮೂದು ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 18:27 IST
Last Updated 13 ಏಪ್ರಿಲ್ 2023, 18:27 IST
   

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಮರಣ ಕಾರಣವನ್ನು ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ಭರ್ತಿ ಮಾಡಿ, ಜನನ–ಮರಣ ಮುಖ್ಯ ನೋಂದಣಾ ಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತರು ಹಾಗೂ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿ ಜಂಟಿ ಯಾಗಿ ಸುತ್ತೋಲೆ ಹೊರಡಿಸಿದ್ದಾರೆ.

ಜನನ, ಮರಣಗಳ ನೋಂದಣಿ ಅಧಿನಿಯಮ 1969ರ ಪ್ರಕಾರ ಎಲ್ಲಾ ವೈದ್ಯರು, ವೈದ್ಯ ವೃತ್ತಿಪರರು ತಾವು ಉಪಚರಿಸಿದ ವ್ಯಕ್ತಿ ಮೃತನಾದಲ್ಲಿ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ಮರಣ ಕಾರಣ ನಮೂದಿಸಬೇಕು. ಮರಣ ಕಾರಣಗಳ ಸಂಗ್ರಹಣೆ, ವಿಶ್ಲೇಷಣೆಯು ಸರ್ಕಾರಕ್ಕೆ, ಆರೋಗ್ಯ ಸಂಶೋಧಕರಿಗೆ ಹಾಗೂ ನೀತಿ ರೂಪಕರಿಗೆ ವಿವಿಧ ನಿರ್ಧಾರ, ಕ್ರಮಗಳನ್ನು ಕೈಗೊಳ್ಳಲು ಅವಶ್ಯವಾಗಿದೆ. ಆದ್ದರಿಂದ ರಾಜ್ಯದ ಎಲ್ಲಾ ಆರೋಗ್ಯ ಸಂಸ್ಥೆಗಳು ಮರಣ ಕಾರಣಗಳನ್ನು ಸಂಗ್ರಹಿಸಬೇಕು. ಆರೋಗ್ಯ ಇಲಾಖೆಯ ಸಹಯೋಗ ದೊಂದಿಗೆ, ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೂ ಇ-ಜನ್ಮ ತಂತ್ರಾಂಶದಲ್ಲಿ ಮರಣ ಘಟನೆಯ ಮಾಹಿತಿಯನ್ನು ದಾಖಲಿಸಲು ಯೂಸರ್ ಐಡಿ, ಫಾಸ್‌ವರ್ಡ್‌ ನೀಡಬೇಕು. ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರವನ್ನು ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಚೇರಿಗೆ ಪ್ರತಿ ತಿಂಗಳು ಸಲ್ಲಿಸಬೇಕು. ನಿಗದಿತ ತಿಂಗಳಲ್ಲಿ ಮರಣ ಸಂಭವಿಸದೇ ಇದ್ದಲ್ಲಿ ‘ಶೂನ್ಯ ವರದಿ’ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.