ಬೆಳಗಾವಿ: ‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ಈಚೆಗಷ್ಟೇ ಲೋಕಾರ್ಪಣೆಯಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಅಪಚಾರ ಮಾಡಿದ್ದು, ಮಾರ್ಚ್ 19ರಂದು ಇಡೀ ದಿನ ಪ್ರತಿಮೆ ಶುದ್ಧೀಕರಣ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತಿಳಿಸಿದೆ.
ಇಲ್ಲಿನ ಮರಾಠಾ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಎಂಇಎಸ್ ನಾಯಕರು ಒಮ್ಮತದಿಂದ ಈ ನಿರ್ಣಯ ಕೈಗೊಂಡರು.
‘ಛತ್ರಪತಿ ಅವರ ಪ್ರತಿಮೆ ಹಾಗೂ ಕೀರ್ತಿಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ರಾಜಕೀಯಕ್ಕೆ ಬಳಸಿದ್ದಾರೆ. ಇದು ಅಕ್ಷಮ್ಯ. ಈ ಪ್ರತಿಮೆ ಶುದ್ಧಗೊಳಿಸುವುದು ಅಗತ್ಯ. ಅದರ ಅಂಗವಾಗಿ ಶಿವಾಜಿ ಮಹಾರಾಜರ ಪಾದಪೂಜೆ, ಪಂಚಾಮೃತ ಅಭಿಷೇಕ ಮತ್ತಿತರ ಕಾರ್ಯಕ್ರಮ ನಡೆಯಲಿವೆ’ ಎಂದು ಮುಖಂಡರು ತಿಳಿಸಿದರು.
‘ಮಹಾರಾಷ್ಟ್ರದ ಕೊಲ್ಹಾಪುರ, ಸಾತಾರ ಮತ್ತು ಜಿಲ್ಲೆಯ ವಿವಿಧೆಡೆ ಇರುವ ಶಿವಾಜಿ ಮಹಾರಾಜರ ಇತಿಹಾಸ ಸಾರುವ ಕೋಟೆಗಳಿಂದ ಶಿವಜ್ಯೋತಿ ತಂದು, ನಗರದಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ ರಾಜಹಂಸಗಡಕ್ಕೆ ತೆಗೆದುಕೊಂಡು ಹೋಗಲಾದು ತಿಳಿಸಿದರು.
ಮುಖಂಡರಾದ ದೀಪಕ ದಳವಿ, ಮನೋಹರ ಕಿಣೇಕರ್, ಎಂ.ಜಿ.ಪಾಟೀಲ, ಪ್ರಕಾಶ ಮರಗಾಲೆ, ವಿಕಾಸ ಕಲಘಟಗಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.