ಮಂಡ್ಯ: ರಾಜ್ಯದಲ್ಲಿ ಆಯ್ದ 200 ಗ್ರಾಮ ಪಂಚಾಯಿತಿಗಳಲ್ಲಿ ಬೀದಿದೀಪಗಳಿಗೆ ಪ್ರಾಯೋಗಿಕವಾಗಿ ಮೀಟರ್ ಅಳವಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ.
ವಿದ್ಯುತ್ ಬಳಕೆಯ ಮೇಲೆ ನಿಗಾ ವಹಿಸುವುದು ಮತ್ತು ವೆಚ್ಚ ಕಡಿಮೆ ಮಾಡುವುದೇ ಪ್ರಮುಖ ಉದ್ದೇಶ. ಅತಿ ಹೆಚ್ಚು ವಿದ್ಯುತ್ ಶುಲ್ಕ ಪಾವತಿಸುವ ಪಂಚಾಯಿತಿಗಳ ವಿವರಗಳನ್ನು ಆರು ‘ಎಸ್ಕಾಂ’ಗಳಿಂದ ಪಡೆದು ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಯೋಜನೆಗೆ ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ.
ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಆಯಾ ಜಿಲ್ಲೆಯ ಎಸ್ಕಾಂಗೆ ಪ್ರಸ್ತಾವ ಸಲ್ಲಿಸಬೇಕು. ಗ್ರಾಮವಾರು ಮೀಟರ್ ಅಳವಡಿಸಲು ಅಂದಾಜು ಪಟ್ಟಿಯನ್ನು ತಯಾರಿಸಿ, ಕ್ರೋಡೀಕೃತ ವರದಿಯನ್ನು ಸಲ್ಲಿಸುವಂತೆ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.
ಜಟಾಪಟಿಗೆ ಕಾರಣ:
‘ವಿದ್ಯುತ್ ಕಂಪನಿಗಳು ಅವೈಜ್ಞಾನಿಕವಾಗಿ ವಿದ್ಯುತ್ ಬಿಲ್ ನೀಡುತ್ತಿರುವುದರಿಂದ ಹಣ ಪಾವತಿ ದೊಡ್ಡ ಹೊರೆಯಾಗಿದೆ’ ಎಂಬುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆರೋಪ. ‘ಕೆಲವು ಪಂಚಾಯಿತಿಗಳು ₹50 ಲಕ್ಷದಿಂದ ₹1 ಕೋಟಿಯವರೆಗೆ ಬಿಲ್ ಬಾಕಿ ಉಳಿಸಿಕೊಂಡಿವೆ. ಇದರಿಂದ ಸಮರ್ಪಕ ವಿದ್ಯುತ್ ಪೂರೈಕೆಗೆ ತೊಡಕಾಗಿದೆ’ ಎಂಬುದು ಸೆಸ್ಕ್ ಅಧಿಕಾರಿಗಳ ದೂರು.
ಹಗಲಿನಲ್ಲೂ ಬೀದಿದೀಪ:
‘ಹಲವು ಗ್ರಾಮಗಳಲ್ಲಿ ಸಮರ್ಪಕ ನಿರ್ವಹಣೆ ಕೊರತೆಯಿಂದ ಹಗಲಲ್ಲೂ ಬೀದಿದೀಪಗಳು ಉರಿಯುತ್ತಿವೆ. ಕೆಲವೆಡೆ ಅನಧಿಕೃತವಾಗಿ ಜನ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದಾರೆ. ಹೀಗಾಗಿ ಪಂಚಾಯಿತಿಗಳಿಗೆ ವಿದ್ಯುತ್ ಶುಲ್ಕ ಪಾವತಿಸುವುದು ದೊಡ್ಡ ಹೊರೆಯಾಗಿತ್ತು. ಮೀಟರ್ ಅಳವಡಿಸಿದರೆ ವಿದ್ಯುತ್ ಪೋಲಾಗುವುದನ್ನು ತಪ್ಪಿಸಬಹುದು’ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.
ಮಂಡ್ಯ ಜಿಲ್ಲೆಯ 7 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ವಿದ್ಯುತ್ ಮೀಟರ್ ಅಳವಡಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ.ಶೇಖ್ ತನ್ವೀರ್ ಆಸಿಫ್,ಸಿಇಒ, ಮಂಡ್ಯ ಜಿಲ್ಲಾ ಪಂಚಾಯಿತಿ
ಮೀಟರ್ ಅಳವಡಿಸುವುದರಿಂದ ಬೀದಿದೀಪಗಳು ಎಷ್ಟು ವಿದ್ಯುತ್ ಬಳಸಿವೆ ಎಂಬ ನಿರ್ದಿಷ್ಟ ಮಾಹಿತಿ ದೊರೆತು, ನಿಖರ ಬಿಲ್ ನೀಡಲು ಅನುಕೂಲವಾಗುತ್ತದೆ .ಶೀಲಾ ಜಿ.,ವ್ಯವಸ್ಥಾಪಕ ನಿರ್ದೇಶಕಿ, ಸೆಸ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.