ADVERTISEMENT

ನಿಜ ಶ್ರಮಿಕ ರೈಲಿನ ಜಾಡಿನಲ್ಲಿ...

ವಾದಿರಾಜ್
Published 28 ಮೇ 2020, 19:45 IST
Last Updated 28 ಮೇ 2020, 19:45 IST
ವಾದಿರಾಜ್‌
ವಾದಿರಾಜ್‌   

ಅನೇಕಲ್ ಪೊಲೀಸ್‌ ಠಾಣೆಯ ನೆರವಿನಲ್ಲಿ ಬಿಎಂಟಿಸಿ ಬಸ್ಸು ಹತ್ತಿ, ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ಹೊರಡಲು ಕಾಯುತ್ತಿದ್ದ ಜಾರ್ಖಂಡ್‌ನ ರಂಜಿತ್ ಸಾಹು ಎಂಬ 22 ವರ್ಷದ ಯುವಕನ ಹೆಗಲ ಚೀಲದ ಜೊತೆಗೆ ಕೈಯಲ್ಲಿ ಇದ್ದದ್ದು ಕ್ರಿಕೆಟ್ ಬ್ಯಾಟು. ಸಿಮೆಂಟು-ಕಾಂಕ್ರೀಟ್ ದೂಳಿನ ನಡುವೆಯೂ ರಂಜಿತನಲ್ಲೊಬ್ಬ ಧೋನಿ ಜೀವಿಸುತ್ತಿದ್ದನೇನೋ?

ಅತ್ತಿಬೆಲೆಯ ಸಮೀಪ ಅರ್ಧಕ್ಕೆ ನಿಂತ ಬೃಹತ್ ವಸತಿ ಸಮುಚ್ಚಯದ ಹಿಂಭಾಗದಲ್ಲಿ 40ಕ್ಕೂ ಹೆಚ್ಚು ಶೆಡ್‌ಗಳು. ಚಂಡಮಾರುತದ ಸುದ್ದಿ ಕೇಳಿ ಪಶ್ಚಿಮ ಬಂಗಾಳದ ಮಾಂಡ್ಲಾ ತಲುಪುವ ಆಸೆ ಕೈಬಿಟ್ಟಿರುವ ಪೂರ್ಣಶೇಷ ಮಂಡಲ್ ಅಲ್ಲೇ ಇದ್ದಬದ್ದ ವ್ಯವಸ್ಥೆಯಲ್ಲೇ ತನ್ನ ಜೊತೆಗಿರುವ ಹೆಂಡತಿಗೊಂದು ಶೌಚಾಲಯ ಕಟ್ಟಿದ್ದಾನೆ.

ಮಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೊರಡಬೇಕಿದ್ದ ರೈಲು, ನಿಗದಿತ ಸಮಯಕ್ಕಿಂತ ಎರಡು ತಾಸು ತಡವಾಗಿ ಚಲಿಸಿತು. ಏಕೆಂದರೆ ಬೆಳ್ತಂಗಡಿ ಸಮೀಪದ ಉಜಿರೆಯಿಂದ ವಿನೋದ್ ಮಸ್ಕರೇನ್ಸ್ ಎಂಬ ಕೃಷಿಕ ತಮ್ಮ ಜೀಪಿನಲ್ಲಿ ಸುರೇಂದ್ರ ಯಾದವ್, ಅಖಿಲೇಶ್ ಸಹಾನಿ, ಸುನೀಲ್ ಸಹಾನಿ, ಶಂಭು ಸಹಾನಿ ಅವರನ್ನು ಕರೆತರುತ್ತಿದ್ದರು.

ADVERTISEMENT

ಮಂಗಳೂರಿನಿಂದ ಜಾರ್ಖಂಡ್‌ಗೆ ಹೊರಟಿದ್ದ ರೈಲನ್ನು ಹತ್ತಿಸಲು ದೂರದ ಶಿರಸಿ, ಮುಂಡ ಗೋಡಿನಿಂದ ಮೂವರು ಕಾರ್ಮಿಕರನ್ನು ಪೊಲೀಸರು ಪ್ರತ್ಯೇಕ ವಾಹನದ ವ್ಯವಸ್ಥೆಮಾಡಿ ಕಳುಹಿಸಿದ್ದರು.

ತಮಿಳುನಾಡಿನ ವೆಲ್ಲೂರಿನ ಹತ್ತಿರ ಉತ್ತರ ಪ್ರದೇಶಕ್ಕೆ ನಡೆದು ಹೋಗುತ್ತಿದ್ದ ಏಳು ಜನ ಕಾರ್ಮಿಕರನ್ನು ರಸ್ತೆಯಲ್ಲಿ ಕಂಡ ಗಿರಿಧರ್ ಗೋಪಾಲ್ ಬೆಂಗಳೂರಿಗೆ ಕರೆತಂದು ಪ್ರಯಾಗರಾಜ್ ರೈಲು ಹತ್ತಿಸಿ ನಿಟ್ಟುಸಿರುಬಿಟ್ಟರು.

ಹರಸಾಹಸದಿಂದ ಉತ್ತರ ಪ್ರದೇಶದ ತನ್ನ ಹಳ್ಳಿ ತಲುಪಿ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದ ತ್ರಿಭುವನ್ ಕಳುಹಿಸಿದ್ದ ಮನೆಯಂಗಳದ ಫೋಟೊವನ್ನು ಗೆಳೆಯರೊಬ್ಬರು ಫೇಸ್‌ಬುಕ್‌ನಲ್ಲಿ ಹಂಚಿದ್ದರು. ‘ದಟ್ಟ ಹಸಿರಿನ ಪರಿಸರ ಬಿಟ್ಟು ಕಾಂಕ್ರೀಟ್ ಕಾಡಿಗೆ ದುಡಿಯಲು ಬರುವವರ ಸಂಕಟ ಏನಿದ್ದೀತು?’ - ಇದು ಅಲ್ಲಿಯೇ ಕೆಳಗಿದ್ದ ಕಾಮೆಂಟು.

ಇವು ವಲಸೆ ಕಾರ್ಮಿಕರ ಪ್ರಪಂಚದ ಕಳೆದ ವಾರದ ಕೆಲ ಚಿತ್ರಗಳು.

* * *

ಅಜ್ಞಾತವಾಗಿ ಕಳೆದುಹೋಗಿದ್ದ ವಲಸೆ ಕಾರ್ಮಿಕರ ಜಗತ್ತೊಂದು ಕೊರೊನಾ ಪೀಡೆಯಿಂದಾಗಿ ಬಯಲಿಗೆ ಬಂದಿದೆ. ಸಣ್ಣ ಸಂಬಳ ಕೊಟ್ಟು ಮತ್ಯಾವ ಸೌಲಭ್ಯವೂ ಕೊಡದೆ ಅವರನ್ನು ದುಡಿಸಿಕೊಳ್ಳುತ್ತಿದ್ದ ನಾಗರಿಕ ಸಮಾಜ ಕಟಕಟೆಯಲ್ಲಿ ನಿಂತಿದೆ. ನೈತಿಕ ಪ್ರಜ್ಞೆ, ಅಪರಾಧಿಭಾವ ಹಲವರನ್ನು ಕಾಡಿದೆ. ಸರ್ಕಾರಗಳ ನಿರಂತರ ನಿರ್ಲಕ್ಷ್ಯವೂ ದೊಡ್ಡ ಸಿದ್ಧಾಂತಗಳ ಟೊಳ್ಳೂ ಬೀದಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು 50 ಸಾವಿರ ಜನಸಂಖ್ಯೆಯ ಪುಟ್ಟ ಪಟ್ಟಣ. ಬೃಹತ್‌ ನಗರ, ಮಹಾನಗರ, ಬೆಳೆಯುತ್ತಿರುವ ನಗರ ಇಂತಹ ಯಾವ ವಿಶೇಷಣಗಳೂ ಈ ತಣ್ಣನೆಯ ಪಟ್ಟಣಕ್ಕೆ ತಾಗುವುದಿಲ್ಲ. ಅಂತಹ ಪುತ್ತೂರಿನಿಂದ ಮೇ 12ರಂದು ಬಿಹಾರದ ಮೋತಿಹಾರಿಗೆ 1,428 ವಲಸೆ ಕಾರ್ಮಿಕರಿದ್ದ ಶ್ರಮಿಕ ವಿಶೇಷ ರೈಲು ಹೊರಟಿತು. ಇನ್ನೂ ಸಾವಿರದಷ್ಟು ಬಿಹಾರ, ಬಂಗಾಳ ಮೂಲದ ಕಾರ್ಮಿಕರು ರೈಲಿನಲ್ಲಿ ಜಾಗ ಸಿಗದೆ ಉಳಿದರು. ಅವರನ್ನು ಮಂಗಳೂರು, ಹಾಸನಕ್ಕೆ ಕರೆದೊಯ್ದು ರೈಲು ಹತ್ತಿಸಲಾಯಿತು. ಇವರಲ್ಲಿ ಬಹುತೇಕರು ಕಟ್ಟಡ ಕಾರ್ಮಿಕರು. ತಿಂಗಳಿಗೆ ₹ 8-10 ಸಾವಿರದಿಂದ ₹ 20 ಸಾವಿರವರೆಗೆ ದುಡಿಯುವವರು ಅವರಾಗಿದ್ದರು.
ದೊಡ್ಡ ನಗರಗಳು ಮಾತ್ರ ವಲಸೆ ಕಾರ್ಮಿಕರನ್ನು ಸಲಹುತ್ತವೆ ಎಂದು ನಂಬಿದ್ದವರಿಗೆ ಪುತ್ತೂರಿನಿಂದ ರೈಲು ಹೊರಟಾಗಲೇ ಸಮಸ್ಯೆ ಯಾವ ಮೂಲೆಯವರೆಗೆ ಹರಡಿ ನಿಂತಿದೆ ಎಂದು ಗೊತ್ತಾದದ್ದು.

‌ಕರ್ನಾಟಕದಲ್ಲಿ ಬಿಹಾರ, ಉತ್ತರ ಪ್ರದೇಶದಿಂದ ವಲಸೆ ಬಂದ ಕಾರ್ಮಿಕರ ಸಂಖ್ಯೆ ಲಕ್ಷ ದಾಟಿದೆ. ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್ ರಾಜ್ಯದವರದ್ದು 50 ಸಾವಿರ ಮೀರಿದೆ. ಲಾಕ್‌ಡೌನ್ ಸ್ವಲ್ಪ ಸಡಿಲಗೊಳ್ಳುತ್ತಿದ್ದಂತೆಯೇ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ ಸಲುವಾಗಿ ನೋಂದಣಿ ಮಾಡಿಕೊಳ್ಳಲು ಸರ್ಕಾರ ಸೇವಾಸಿಂಧು ಆ್ಯಪ್‌ ಬಿಡುಗಡೆ ಮಾಡಿದೆ. ಸೇವಾಸಿಂಧುವಿನಲ್ಲಿ ದಾಖಲಾದ ಸಂಖ್ಯೆಯ ಆಧಾರದಲ್ಲೇ ಶ್ರಮಿಕ ರೈಲುಗಳು ನಿಯೋಜನೆ ಆಗುತ್ತಿವೆ.

ಕರ್ನಾಟಕದಲ್ಲಿ ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಿಂದ ಅತ್ಯಂತ ಹೆಚ್ಚು ಕಾರ್ಮಿಕರು ಮು‌ಂಬೈ, ಪಣಜಿ, ಮಂಗಳೂರು, ಬೆಂಗಳೂರಿನತ್ತ ವಲಸೆ ಹೋಗುತ್ತಾರೆ. ಆದರೆ, ಇದೇ ಜಿಲ್ಲೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಹೊರರಾಜ್ಯಗಳ ವಲಸೆ ಕಾರ್ಮಿಕರು ದುಡಿಯುತ್ತಿದ್ದಾರೆ.

ಶ್ರಮಿಕ ರೈಲುಗಳು ಎಲ್ಲಿಂದ, ಎಲ್ಲಿಗೆ ಹೊರಟವು ಎಂಬುದು ಈ ಸಂಖ್ಯೆಯನ್ನು ದೃಢಪಡಿಸುತ್ತವೆ. ಬೆಂಗಳೂರಿನಿಂದಲೇ 220 ರೈಲುಗಳು ಹೊರಟಿವೆ. ಹಾಗೆ ನೋಡಿದರೆ ಕಾರ್ಮಿಕ ಇಲಾಖೆ ಜಾಗತೀಕರಣದ ಹೊಡೆತದಲ್ಲಿ ಅಪ್ರಸ್ತುತವಾಗಿ ಹೋಗಿತ್ತು. ಈಗಲೂ ಕೇಂದ್ರದ್ದೋ ರಾಜ್ಯದ್ದೋ ಕಾರ್ಮಿಕ ಸಚಿವರು ಯಾರು ಎಂದು ಥಟ್ಟನೆ ಕಣ್ಣಮುಂದೆ ಬಾರದಷ್ಟು ಇಲಾಖೆ ಮಸುಕಾಗಿದೆ. ವಲಸೆ ಕಾರ್ಮಿಕರನ್ನು ಈಗಲೂ ನಿಭಾಯಿಸುತ್ತಿರುವುದು ಪೊಲೀಸ್ ಇಲಾಖೆ! ಲಕ್ಷಾಂತರ ಕಾರ್ಮಿಕರನ್ನು ನಿಭಾಯಿಸುವಷ್ಟು ಇಲಾಖೆಯನ್ನು ಎಲ್ಲ ಆಯಾಮದಿಂದಲೂ ಬಲಪಡಿಸಬೇಕು. ಗೃಹ, ರಕ್ಷಣೆ, ವಿದೇಶಾಂಗ, ವಿತ್ತ ಖಾತೆಗಳಿಗಿದ್ದಷ್ಟೇ ಮಹತ್ವ - ಹಣಕಾಸಿನ ನೆರವು ಕಾರ್ಮಿಕ ಖಾತೆಗೂ ಸಿಗಬೇಕು. ಡಾ. ಬಾಬಾಸಾಹೇಬ್ ಅಂಬೇಡ್ಕರ್ 1937ರಲ್ಲಿ ಕಾರ್ಮಿಕ ಸಚಿವರಾದಾಗ ‘ಕಾರ್ಮಿಕ ಕಲ್ಯಾಣ’ ಖಾತೆ ಎಂದು ಬದಲಾಯಿಸಿದ್ದರು. ಅದು ಈಗಲೂ ನಮಗೆ ಮಾದರಿಯಾಗಬೇಕು.

ಉದ್ಯೋಗಾವಕಾಶಗಳಿಗಾಗಿ ವಲಸೆ ಅನಿವಾರ್ಯ, ನಿಜ. ಈಗ ವಲಸೆ ವಿದ್ಯಾಭ್ಯಾಸಕ್ಕೂ ಅಂಟಿಕೊಂಡಿದೆ. ಕರ್ನಾಟಕದತ್ತ ಬಿಹಾರ, ಬಂಗಾಳದವರು ಉದ್ಯೋಗ ಅರಸಿ ಬಂದರೆ, ಈಶಾನ್ಯ ರಾಜ್ಯಗಳಿಂದ ವಿದ್ಯಾಭ್ಯಾಸಕ್ಕೆ ಬಂದವರು ಇಲ್ಲಿಯೇ ನೆಲೆ ಹುಡುಕಿಕೊಳ್ಳುತ್ತಿದ್ದಾರೆ. ಅನಿವಾರ್ಯವೆನಿಸಿದ್ದು ಮಿತಿ ಮೀರಿದಾಗ ಅಪಾಯ ತೆರೆದುಕೊಳ್ಳುತ್ತದೆ. ಅನಿವಾರ್ಯತೆಯ ಮಿತಿಯನ್ನು ಗುರುತಿಸಲು, ಅರ್ಥಮಾಡಿಕೊಳ್ಳಲು ಈ ಸಂಕಟ ಅವಕಾಶವೂ ಹೌದು.

ವಲಸಿಗರು ಎರಡು ರಾಜ್ಯಗಳ ಪ್ರಜೆಗಳು. ಹೀಗಾಗಿಯೇ ಅವರು ಎಲ್ಲಿಯೂ ಸಲ್ಲದೆ ಕಳೆದು ಹೋಗುತ್ತಿದ್ದಾರೆ. ದುಡಿಯುತ್ತಿರುವ ರಾಜ್ಯದ ಆಡಳಿತಕ್ಕೆ ಇವರು ಬೇಕಾಗಿಲ್ಲ, ಏಕೆಂದರೆ ಇವರು ಇಲ್ಲಿ ಮತದಾರರಲ್ಲ. ಹೊರಟುಬಂದ ರಾಜ್ಯದ ಆಡಳಿತಕ್ಕೆ ಇವರು ಕಣ್ಣೆದುರಿಲ್ಲ.

ತಂತ್ರಜ್ಞಾನ, ಕೌಶಲ ಮೈಮುರಿದು, ಬೆವರು ಸುರಿಸಿ ದುಡಿಯುವವರ ಬದುಕನ್ನು ಸಹ್ಯವಾಗಿಸಬೇಕು. ಆ ದಿಕ್ಕಿನಲ್ಲಿ ಸಂಶೋಧನೆಗಳು ದೊಡ್ಡ ಹೆಜ್ಜೆ ಇಡಬೇಕು.

ನಮ್ಮೆದುರು ಕೇಂದ್ರ, ರಾಜ್ಯ ಎಂಬ ಎರಡೇ ಸರ್ಕಾರಗಳಿವೆ. ಪಂಚಾಯತ್ ರಾಜ್‌ನ ಮೂರನೇ ಸರ್ಕಾರ ಪ್ರಬಲಗೊಳ್ಳಬೇಕು. 8 - 10 ಗ್ರಾಮ ಸಮುಚ್ಚಯಗಳು ಕೃಷಿ, ಗ್ರಾಮೀಣ ಉದ್ಯೋಗ, ಆರ್ಥಿಕತೆ, ಸಾಮಾಜಿಕ ನ್ಯಾಯದ ವಿಷಯದಲ್ಲಿ ನಿಜಾರ್ಥದಲ್ಲಿ ಸ್ವಾವಲಂಬನೆ ಸಾಧಿಸಬೇಕು.

ಈಗ ದಿಲ್ಲಿ, ಬೆಂಗಳೂರು, ಕೋಲ್ಕತ್ತ, ಪಟ್ನಾಗಳು ಎಂಜಿನ್‌ಗಳಾಗಿವೆ. ಕಾರ್ಮಿಕರು, ಗ್ರಾಮೀಣರು ಬೋಗಿಗಳಾಗಿ ಅವರು ಎಳೆದೊಯ್ದಲ್ಲಿ ಹೋಗುವಂತಾಗಿದೆ. ಇದು ಬದಲಾಗಬೇಕು. ಕಾರ್ಮಿಕರು, ಗ್ರಾಮೀಣರು ಎಂಜಿನ್ ಆಗಬೇಕು. ಅದೇ ನಿಜವಾದ ಲೋಕಲ್ಲು. ಅದೇ ನಿಜವಾದ ಶ್ರಮಿಕ ರೈಲು!

ಲೇಖಕ: ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.