ADVERTISEMENT

ಮಸೀದಿಗಳಲ್ಲಿ ಧ್ವನಿವರ್ಧಕ: ಸ್ಪಷ್ಟನೆ ಕೇಳಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 16:18 IST
Last Updated 16 ನವೆಂಬರ್ 2021, 16:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‘ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಲು ರಾಜ್ಯ ವಕ್ಫ್‌ ಮಂಡಳಿಯು ಯಾವ ಕಾನೂನಿನ ಅಡಿ ಅವಕಾಶ ನೀಡಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೊಳಿಸಲು ಕೋರಿ ಗಿರೀಶ್ ಭಾರದ್ವಾಜ್ ಹಾಗೂ ‘ಥಣಿಸಂದ್ರ ಸುತ್ತಮುತ್ತಲಿನ ಮಸೀದಿಗಳಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ತಡೆಯಲು ನಿರ್ದೇಶಿಸಬೇಕು’ ಎಂದು ಕೋರಿ ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶ್ರೀಧರ್ ಪ್ರಭು, ‘ವಕ್ಫ್ ಮಂಡಳಿ ತನಗೆ ಅಧಿಕಾರ ಇಲ್ಲದಿದ್ದರೂ ಕಡಿಮೆ ಡೆಸಿಬಲ್ ದ್ವನಿವರ್ಧಕಗಳನ್ನು ಬಳಸುವಂತೆ ಮಸೀದಿಗಳಿಗೆ ಸುತ್ತೋಲೆ ಹೊರಡಿಸಿದೆ. ಇದು ಸರಿಯಾದ ಕ್ರಮವಲ್ಲ’ ಎಂದರು.

ADVERTISEMENT

‘ಶಬ್ದ ಮಾಲಿನ್ಯ ನಿಯಂತ್ರಣ ನಿಯಮ–2000 ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ರಾಷ್ಟ್ರೀಯ ಮತ್ತು ಸಾರ್ವಜನಿಕ ಹಬ್ಬಗಳಲ್ಲಿ ಮಾತ್ರವೇ ರಾತ್ರಿ 12ರವರೆಗೂ ಧ್ವನಿವರ್ಧಕ ಬಳಸಬಹುದು. ಅದೂ ಸತತ 15 ದಿನಗಳವರೆಗೆ ಮಾತ್ರ. ಆ ಅವಧಿಯನ್ನು ಮೀರಿ ಬಳಸುವುದು ಕಾನೂನು ಬಾಹಿರ. ಆದರೆ, ಈ ನಿಯಮಗಳು ಯಾವವೂ ಪಾಲನೆಯಾಗುತ್ತಿಲ್ಲ’ ಎಂದು ಬಲವಾಗಿ ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪರಿಸ್ಥಿತಿ ನೋಡಿದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತಲ್ಲದೆ, ‘ಮಾರ್ಪಡಿಸಿದ ಸೈಲೆನ್ಸರ್ ಮತ್ತು ಹಾರ್ನ್‌ಗಳಿಂದ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.