ADVERTISEMENT

ಹಾಲು ಖರೀದಿ ದರ ಶೀಘ್ರ ಹೆಚ್ಚಳ: ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 23:30 IST
Last Updated 11 ಜುಲೈ 2023, 23:30 IST
   

ಬೆಂಗಳೂರು: ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸಲಾಗುವುದು. ಚರ್ಚೆಯ ನಂತರ ಪರಿಷ್ಕೃತ ದರ ನಿಗದಿ ಮಾಡಲಾಗುವುದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಹೇಳಿದರು.

ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ, ಎಸ್‌.ಎಲ್‌.ಭೋಜೇಗೌಡ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಪ್ರತಿ ಲೀಟರ್‌ ಹಾಲಿಗೆ ಒಕ್ಕೂಟಗಳು ₹ 28 ನೀಡಿದರೆ, ಸರ್ಕಾರ ₹ 5 ಪ್ರೋತ್ಸಾಹ ಧನ ನೀಡುತ್ತಿದೆ. ಹಾಲಿನ ಕೊರತೆ ಇರುವ ಭಾಗಗಳಲ್ಲಿ ಖಾಸಗಿಯವರು ರೈತರಿಂದ ಅಧಿಕ ದರ ನೀಡಿ ಹಾಲು ಖರೀದಿಸುತ್ತಿದ್ದಾರೆ. ಹಾಲು ಒಕ್ಕೂಟಗಳು ಹೆಚ್ಚಿನ ದರ ನೀಡಿ ಹಾಲು ಖರೀದಿಸಿದರೆ ಖಾಸಗಿ ಪೈಪೋಟಿ ಎದುರಿಸಬಹುದು. ಅಲ್ಲದೇ, ಬೆಲೆ ಏರಿಕೆಯ ಈ ದಿನಗಳಲ್ಲಿ ಹಸು, ಎಮ್ಮೆ ಸಾಕಲು ಸಾಕಷ್ಟು ಖರ್ಚು ಬರುತ್ತದೆ. ಹಾಗಾಗಿ, ದರ ಹೆಚ್ಚಳ ಖಚಿತ ಎಂದರು.

ಫೆಬ್ರುವರಿಯವರೆಗೆ ಪ್ರೋತ್ಸಾಹ ಧನ ಬಾಕಿ ಇತ್ಯರ್ಥವಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಹಾಲು ಉತ್ಪಾದಕರಿಗೆ ಏಪ್ರಿಲ್‌ವರೆಗೆ ನೀಡಲಾಗಿದೆ. ಉಳಿದ ಬಾಕಿ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದರು.

ADVERTISEMENT

‘ಏಪ್ರಿಲ್‌ವರೆಗಿನ ಬಾಕಿ ಪರಿಶಿಷ್ಟರಿಗೆ ಮಾತ್ರ ಕೊಟ್ಟಿದ್ದು ಏಕೆ?. ಉಳಿದವರು ಏನು ಮಾಡಿದ್ದಾರೆ’ ಎಂಬ ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ ಕಾಂಗ್ರೆಸ್‌ ಸದಸ್ಯರು ಕೆರಳಿದರು. ಪದವನ್ನು ಕಡತದಿಂದ ತೆಗೆಯುವಂತೆ ಆಗ್ರಹಿಸಿದರು. ಆದರೆ, ತೆಗೆಯಲು ಸಭಾಪತಿ ಸಮ್ಮತಿ ನೀಡಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.