ಬೆಂಗಳೂರು: ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಹಾಲಿನ ದರ ಹೆಚ್ಚಳ ಮಾಡುವಂತೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಮತ್ತು ಹಾಲು ಉತ್ಪಾದಕರ ಒಕ್ಕೂಟಗಳು ಪಶುಸಂಗೋಪನಾ ಇಲಾಖೆಗೆ ಬೇಡಿಕೆ ಇಟ್ಟಿವೆ. ಹೊಸ ವರ್ಷದ ವೇಳೆಗೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ.
ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಗರಿಷ್ಠ ಶೇಕಡ 5ರವರೆಗೆ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಕೋರಿ ಪಶುಸಂಗೋಪನಾ ಇಲಾಖೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವ ಸಲ್ಲಿಸಿದೆ. ಕೆಎಂಎಫ್ ಹಂತದಲ್ಲೇ ಹಾಲಿನ ದರ ಪರಿಷ್ಕರಣೆಗೆ ಅನುಮತಿ ನೀಡಬೇಕು ಎಂದು ಪ್ರಸ್ತಾವದಲ್ಲಿ ಕೋರಲಾಗಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ‘ಉತ್ಪಾದನಾ ವೆಚ್ಚ ಹೆಚ್ಚಳದಿಂದ ಆಗುತ್ತಿರುವ ಹೊರೆ ಕುರಿತು ಹಾಲು ಉತ್ಪಾದಕರ ಒಕ್ಕೂಟಗಳು ಅಹವಾಲು ಸಲ್ಲಿಸಿವೆ. ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ ₹ 47 ಇದೆ. ಇತರ ರಾಜ್ಯಗಳಲ್ಲಿ ಹಾಲಿನ ದರ ಇನ್ನೂ ಹೆಚ್ಚಾಗಿದೆ. ನಂದಿನ ಹಾಲನ್ನು ಹೊರ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ’ ಎಂದರು.
ಕೆಎಂಎಫ್ ನಂದಿನ ಹಾಲಿನ ದರವನ್ನು ಸೆಪ್ಟೆಂಬರ್ 1ರಂದು ಪ್ರತಿ ಲೀಟರ್‌ಗೆ ₹3ರಷ್ಟು ಹೆಚ್ಚಳ ಮಾಡಿತ್ತು. ಆದರೆ, ಅಮೂಲ್ 2022ರ ಮಾರ್ಚ್‌ನಿಂದ 2023ರ ಫೆಬ್ರುವರಿಯವರೆಗೆ ಹತ್ತು ತಿಂಗಳ ಅವಧಿಯಲ್ಲಿ ಲೀಟರ್‌ಗೆ 12 ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
‘ಹಾಲಿನ ದರ ಹೆಚ್ಚಳಕ್ಕೆ ನಿರ್ಧರಿಸಲಾಗಿದೆಯೆ’ ಎಂಬ ಪ್ರಶ್ನೆಗೆ, ‘ಹಾಲು ಉತ್ಪಾದಕರು ಮತ್ತು ಹಾಲು ಉತ್ಪಾದಕರ ಒಕ್ಕೂಟಗಳಿಂದ ಹೆಚ್ಚಿನ ಒತ್ತಡವಿದೆ. ಮುಂದಿನ ವರ್ಷದ ವೇಳೆಗೆ ನೋಡೋಣ’ ಎಂದು ಪ್ರತಿಕ್ರಿಯಿಸಿದರು.
ಕ್ಷೀರ ಭಾಗ್ಯ ಯೋಜನೆಗೆ ಕೆಎಂಎಫ್ ಪೂರೈಸುತ್ತಿರುವ ಹಾಲಿನಪುಡಿಯ ದರವನ್ನು ಪ್ರತಿ ಕೆ.ಜಿ.ಗೆ ₹400+ ಸರಕು ಮತ್ತು ಸೇವಾ ತೆರಿಗೆ ಎಂಬುದಾಗಿ ನಿಗದಿಪಡಿಸಬೇಕು. ಈಗ ಪ್ರತಿ ಕೆ.ಜಿ. ಹಾಲಿನ ಪುಡಿಗೆ ₹300+ ತೆರಿಗೆ ನೀಡಲಾಗುತ್ತಿದೆ. ಇದರಿಂದ ಕೆಎಂಎಫ್‌ಗೆ ನಷ್ಟವಾಗುತ್ತಿದೆ ಎಂದು ಇಲಾಖೆ ಕೆಎಂಎಫ್ ಬೇಡಿಕೆ ಇಟ್ಟಿದೆ. ಹಾಲಿನ ಪುಡಿ ದರ ಹೆಚ್ಚಳ ಕೋರಿರುವ ಪ್ರಸ್ತಾವವನ್ನೂ ಪಶುಸಂಗೋಪನಾ ಇಲಾಖೆ ಮುಖ್ಯಮಂತ್ರಿಯವರಿಗೆ ಸಲ್ಲಿಸಿದೆ.
ಕೆಎಂಎಫ್‌ನಿಂದ ಜೋಳ ಖರೀದಿ: ‘ರೈತರಿಂದ ಒಂದು ಲಕ್ಷ ಟನ್ ಜೋಳ ಖರೀದಿಸಲು ಕೆಎಂಎಫ್ ನಿರ್ಧರಿಸಿದೆ. ಪ್ರತಿ ಕ್ವಿಂಟಲ್‌ಗೆ ₹ 2,090 ದರವಿದ್ದು, ಕೆಎಂಎಫ್ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಲ್‌ಗೆ ₹ 160 ನೀಡಲಿದೆ. ಸೋಮವಾರದಿಂದ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು’ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.