ADVERTISEMENT

2 ವರ್ಷದಲ್ಲಿ ಮುನಿರತ್ನ ಆಸ್ತಿ ದುಪ್ಪಟ್ಟು, ಕೃಷ್ಣಮೂರ್ತಿ ಆಸ್ತಿ ₹ 19 ಕೋಟಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 19:31 IST
Last Updated 14 ಅಕ್ಟೋಬರ್ 2020, 19:31 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಅನರ್ಹ ಶಾಸಕ ಮುನಿರತ್ನ ಅವರ ಆಸ್ತಿ ಎರಡೇ ವರ್ಷಗಳ ಅಂತರದಲ್ಲಿ ದುಪ್ಪಟ್ಟಾಗಿದೆ.

2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈಗ ಅವರ ಆಸ್ತಿಯ ಮೌಲ್ಯ ಶೇಕಡ 103ರಷ್ಟು ಹೆಚ್ಚಳವಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮುನಿರತ್ನ ಹಾಗೂ ಅವರ ಪತ್ನಿ ಒಟ್ಟು ₹ 43.71 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದರು. ಉಪ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸುವಾಗ ನೀಡಿರುವ ಪ್ರಮಾಣಪತ್ರದಲ್ಲಿ ₹ 89.13 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ.

ADVERTISEMENT

ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ಒಂದು ಪ್ರಕರಣ, ನಂಬಿಕೆ ದ್ರೋಹ, ಫೋರ್ಜರಿ, ಒಳಸಂಚು ಸೇರಿದಂತೆ ವಿವಿಧ ಆರೋಪಗಳಡಿ ತನ್ನ ವಿರುದ್ಧ ಮೂರು ಕ್ರಿಮಿನಲ್‌ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇವೆ ಎಂಬುದನ್ನು ಅವರು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುನಿರತ್ನ ₹ 29.11 ಕೋಟಿ ಚರಾಸ್ತಿ ಮತ್ತು ₹ 51.91 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಮಂಜುಳಾ ₹ 40.97 ಲಕ್ಷ ಮೌಲ್ಯದ ಚರಾಸ್ತಿ ಮತ್ತು ₹ 10. 69 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ದಂಪತಿಯ ಒಟ್ಟು ₹ 46.41 ಕೋಟಿ ಮೊತ್ತದ ಸಾಲ ಹೊಂದಿದ್ದಾರೆ. ₹ 1.30 ಕೋಟಿ ಮೌಲ್ಯದ 30 ವಾಹನಗಳು ಅವರ ಬಳಿ ಇದ್ದು, ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ₹ 21.37 ಕೋಟಿ ಸಾಲ ನೀಡಿದ್ದಾರೆ. ಅವರ ಬಳಿ 3.9 ಕೆ.ಜಿ. ಚಿನ್ನ ಮತ್ತು 40 ಕೆ.ಜಿ. ಬೆಳ್ಳಿ ಇರುವುದನ್ನು ಘೋಷಿಸಿಕೊಂಡಿದ್ದಾರೆ.

ಕುಸುಮಾ ಆಸ್ತಿ ₹ 2.5 ಕೋಟಿ: ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕುಸುಮಾ ಎಚ್‌. ₹ 2.5 ಕೋಟಿ ಆಸ್ತಿ ಮತ್ತು ₹ 20 ಲಕ್ಷ ಸಾಲ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಕೈಯಲ್ಲಿರುವ ನಗದು, ಬ್ಯಾಂಕ್‌ ಖಾತೆಗಳಲ್ಲಿರುವ ಮೊತ್ತ, ಹೂಡಿಕೆ, ಚಿನ್ನಾಭರಣ ಸೇರಿದಂತೆ ₹ 1.13 ಕೋಟಿ ಚರಾಸ್ತಿ ಕುಸುಮಾ ಬಳಿ ಇದೆ. ₹ 1.17 ಕೋಟಿ ಮೌಲ್ಯದ ಎರಡು ಸ್ಥಿರಾಸ್ತಿಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ₹ 20.48 ಲಕ್ಷ ಸಾಲ ಪಡೆದಿರುವುದನ್ನು ಉಲ್ಲೇಖಿಸಿದ್ದಾರೆ.

ಅವರ ಪತಿ ದಿವಂಗತ ಡಿ.ಕೆ. ರವಿ ಗೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಕುಸುಮಾ ಅವರು ತಮ್ಮ ನಾಮಪತ್ರ ಹಾಗೂ ಪ್ರಮಾಣಪತ್ರಗಳಲ್ಲಿ ಉಲ್ಲೇಖಿಸಿಲ್ಲ.

ಕೃಷ್ಣಮೂರ್ತಿ ಆಸ್ತಿ ₹ 19 ಕೋಟಿ: ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ವಿ. ₹ 18.01 ಲಕ್ಷ ಮೌಲ್ಯದ ಚರಾಸ್ತಿ ಮತ್ತು ₹ 18.03 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಅವರ ಪತ್ನಿಯ ಬಳಿ ₹ 5.56 ಲಕ್ಷ ಮೌಲ್ಯದ ಸ್ಥಿರಾಸ್ತಿ ಮತ್ತು ₹ 59 ಲಕ್ಷ ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.