ADVERTISEMENT

ಜಾತಿಯಿಂದ ಅಕ್ಷರ ವಂಚಿತರಾದ ಲಕ್ಷಾಂತರ ಮಂದಿ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 15:28 IST
Last Updated 18 ನವೆಂಬರ್ 2024, 15:28 IST
<div class="paragraphs"><p>‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ರಮಣಶ್ರೀ ಪ್ರತಿಷ್ಠಾನ’ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಮಣಶ್ರೀ ಶರಣ ಪ್ರಶಸ್ತಿ – 2024’ ಪ್ರದಾನ ಮಾಡಲಾಯಿತು.</p></div>

‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ರಮಣಶ್ರೀ ಪ್ರತಿಷ್ಠಾನ’ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಮಣಶ್ರೀ ಶರಣ ಪ್ರಶಸ್ತಿ – 2024’ ಪ್ರದಾನ ಮಾಡಲಾಯಿತು.

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಜಾತಿ ವ್ಯವಸ್ಥೆಯಿಂದ ಲಕ್ಷಾಂತರ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಎಲ್ಲರಿಗೂ ಅಕ್ಷರ ಸಂಸ್ಕೃತಿ ದೊರೆತಿದ್ದರೆ ಇಷ್ಟೊಂದು ಅಸಮಾನತೆ ಇರುತ್ತಿರಲಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು’ ಮತ್ತು ‘ರಮಣಶ್ರೀ ಪ್ರತಿಷ್ಠಾನ’ ಜಂಟಿಯಾಗಿ  ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಮೌಢ್ಯ, ಕರ್ಮ ಸಿದ್ಧಾಂತ, ಕಂದಾಚಾರಗಳನ್ನು ಬಿಟ್ಟು ಬಸವಾದಿ ಶರಣರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಬಸವಣ್ಣನವರ ವಚನ ಹೇಳಿ, ಜಾತಿ ಬಗ್ಗೆ ಮಾತನಾಡುತ್ತಾರೆ. ಸಮಾಜದಲ್ಲಿ ಇಂದೂ  ಜಾತಿ ವ್ಯವಸ್ಥೆ ಇದ್ದು, ಅದು ಹೋಗಿ ಮಾನವೀಯತೆಯುಳ್ಳ ಸಮಾಜ ನಿರ್ಮಾಣವಾಗಬೇಕು. ವಿದ್ಯಾವಂತರು ಕೂಡ ಪೂರ್ವಜರು ಮಾಡಿದ ಕರ್ಮ, ಹಣೆಬರಹ ಎಂದು ಕರ್ಮಸಿದ್ಧಾಂತಗಳನ್ನು ಮಾತನಾಡುತ್ತಾರೆ’ ಎಂದರು.

‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್‌ ಅವರು ಬಸವ ಮಂಟಪ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಅದಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಗೊಂದಲಗಳಿಗೆ ಉತ್ತರ: ‘ಇತ್ತೀಚಿನ ದಿನಗಳಲ್ಲಿ ಗೊಂದಲ ಸೃಷ್ಟಿಸುವುದೇ ಒಂದು ಕಾಯಕವಾಗಿದೆ. ಇದಕ್ಕೆಲ್ಲ ಶರಣ ಸಾಹಿತ್ಯದಲ್ಲಿ ಸರಳ ಉತ್ತರ ಇದೆ‌. ಬಸವ ಸಾಹಿತ್ಯ ಈಗಲೂ ಪ್ರಸ್ತುತ. ಅಸಮಾನತೆ ವಿರುದ್ದ, ಲಿಂಗಭೇದ, ಮೌಢ್ಯದ ವಿರುದ್ದ 800 ವರ್ಷಗಳ ಹಿಂದೆ ಹೋರಾಟ ಮಾಡಿದ್ದರು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

‘ಸಮಾಜದಲ್ಲಿ ಜ್ಞಾನದ ಬೆಳವಣಿಗೆ ಆಗಿದೆ. ಜ್ಞಾನದ ಜೊತೆಗೆ ಮೌಲ್ಯಗಳ ಬದಲಾವಣೆ ಆಗಬೇಕು. ನಾಗರಿಕತೆ ಹಾಗೂ ಸಂಸ್ಕೃತಿ ನಡುವೆ ವ್ಯತ್ಯಾಸ ಇದೆ. ನಾವೇನಾಗಿದ್ದೇವೆ ಎಂದು ತಿಳಿದುಕೊಂಡರೆ ಖಂಡಿತವಾಗಿಯೂ ಬಸವಣ್ಣ ಹೇಳಿದಂತೆ ನಡೆಯಬೇಕಾಗುತ್ತದೆ’ ಎಂದರು.

ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್. ಷಡಕ್ಷರಿ ಅವರ ‘ಕ್ಷಣ ಹೊತ್ತು ಆಣಿಮುತ್ತು' ಭಾಗ-14ರ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಷರಿಷತ್‌ನ ಗೌರವ ಸಲಹೆಗಾರ ಗೊ.ರು. ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಮನು ಬಳಿಗಾರ್, ‘ವಿಶ್ವವಾಣಿ’ಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.