ಬೆಂಗಳೂರು: ‘ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಸರಗೂರು ಹೋಬಳಿಯ ಶಂಭುಗೌಡನ ಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿರುವ ನನ್ನ ಖಾಸಗಿ ಜಮೀನುಗಳಿಗೆ; ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಮಾರ್ಗದ ಮೂಲಕ ರಾತ್ರಿ ಹಾಗೂ ಹಗಲಿನ ಸಮಯದಲ್ಲಿ ಅನಿರ್ಬಂಧಿತವಾಗಿ ಸಂಚರಿಸಲು ಅನುಮತಿ ನೀಡುವಂತೆ ಅರಣ್ಯಾಧಿಕಾರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಇಂಧನ ಸಚಿವ ಕೆ.ಜೆ.ಜಾರ್ಜ್ ಪುತ್ರ ರಾಣಾ ಜಾರ್ಜ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ರಾಣಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
‘ನನ್ನ ಖಾಸಗಿ ಆಸ್ತಿಯ ಜಾಗಗಳನ್ನು ತಲುಪಲು ನುಗು ವನ್ಯಜೀವಿ ಅಭಯಾರಣ್ಯದ ಮೂಲಕವೇ ಹಾದು ಹೋಗಬೇಕು. ಆದರೆ, ಈ ರಸ್ತೆಯಲ್ಲಿ ಸಂಜೆ 6ರಿಂದ ಮುಂಜಾನೆ 6 ಗಂಟೆಯವರೆಗೆ ಮಾತ್ರವೇ ಸಂಚರಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ರದ್ದುಪಡಿಸಿ ಅನಿರ್ಬಂಧಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಕೋರಿ ರಾಣಾ ಜಾರ್ಜ್ (41) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಣಾ ಜಾರ್ಜ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಂ ಹುಯಿಲಗೋಳ, ‘ಅಭಯಾರಣ್ಯದ ವ್ಯಾಪ್ತಿಯಲ್ಲಿ ಜಮೀನು ಹೊಂದಿರುವವರಿಗೆ ಸಂಚರಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಕಲಂ 27(1)(ಸಿ) ಅಡಿ ವಿನಾಯಿತಿ ಇದೆ. ಆದರೆ, ಈ ಪ್ರಕರಣದಲ್ಲಿ ಅರಣ್ಯ ಇಲಾಖೆ ಅರ್ಜಿದಾರರ ವಿರುದ್ಧ ಕಾನೂನುಬಾಹಿರ ಆದೇಶ ಹೊರಡಿಸಿದೆ. ಇದು ಸಂವಿಧಾನದ 19 (1)(ಡಿ) ವಿಧಿಗೆ ವ್ಯತಿರಿಕ್ತವಾಗಿದ್ದು, ಮುಕ್ತಸಂಚಾರಕ್ಕೆ ಅಡ್ಡಿ ಮಾಡಿರುವ ಅರಣ್ಯ ಇಲಾಖೆಯ ಈ ನಿರ್ಬಂಧವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.
ಈ ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು. ರಾಣಾ ಜಾರ್ಜ್ ಪರ ಹೈಕೋರ್ಟ್ ವಕೀಲ ಮೃಣಾಲ್ ಕುಟ್ಟಪ್ಪ ವಕಾಲತ್ತು ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.