ADVERTISEMENT

ನಿರಂಕುಶ ಪ್ರಭುತ್ವದ ಮಾನಸಿಕತೆ ಬದಲಾಗಲಿ: ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 15:11 IST
Last Updated 14 ಅಕ್ಟೋಬರ್ 2018, 15:11 IST
ಶಿರಸಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ಬಾಲ ರಾಮಾಯಣ’ ಅನುವಾದಿತ ಕೃತಿಯನ್ನು ಕೆ.ವಿ.ಅಕ್ಷರ (ಬಲದಿಂದ ಮೊದಲನೆಯವರು) ಬಿಡುಗಡೆಗೊಳಿಸಿದರು. ವಿಶ್ವಶಾಂತಿ ಟ್ರಸ್ಟ್ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ, ಲೇಖಕ ಮಾಧವ ಚಿಪ್ಪಳಿ, ಕೃತಿಕಾರ ಪ್ರೊ. ಎಂ.ಎ.ಹೆಗಡೆ ದಂಟ್ಕಲ್ ಇದ್ದಾರೆ
ಶಿರಸಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ಬಾಲ ರಾಮಾಯಣ’ ಅನುವಾದಿತ ಕೃತಿಯನ್ನು ಕೆ.ವಿ.ಅಕ್ಷರ (ಬಲದಿಂದ ಮೊದಲನೆಯವರು) ಬಿಡುಗಡೆಗೊಳಿಸಿದರು. ವಿಶ್ವಶಾಂತಿ ಟ್ರಸ್ಟ್ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ, ಲೇಖಕ ಮಾಧವ ಚಿಪ್ಪಳಿ, ಕೃತಿಕಾರ ಪ್ರೊ. ಎಂ.ಎ.ಹೆಗಡೆ ದಂಟ್ಕಲ್ ಇದ್ದಾರೆ   

ಶಿರಸಿ: ‘ಎಡ ಹಾಗೂ ಬಲ ಪಂಥೀಯ ವಿಚಾರಗಳನ್ನು ಸಂಯುಕ್ತವಾಗಿ ಗ್ರಹಿಸುವಲ್ಲಿ ಎಡವಿರುವ ಕಾರಣ ಸಮಾಜದಲ್ಲಿ ವಿಕೃತಿಗಳು ಹೆಚ್ಚುತ್ತಿವೆ. ಏಕ ದೃಷ್ಟಿಯಿಂದ ನೋಡುವ ನಿರಂಕುಶ ಪ್ರಭುತ್ವದ ಮಾನಸಿಕತೆ ಬದಲಾಗದಿದ್ದರೆ, ಈ ಕಾಲಘಟ್ಟದಲ್ಲಿ ಮಹತ್ವದ ಕವಿಗಳು ಹುಟ್ಟಲು ಸಾಧ್ಯವಿಲ್ಲ’ ಎಂದು ಹೆಗ್ಗೋಡು ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ ಅಭಿಪ್ರಾಯಪಟ್ಟರು.

ವಿಶ್ವಶಾಂತಿ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಕ್ಷರ ಪ್ರಕಾಶನ ಪ್ರಕಟಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ದಂಟ್ಕಲ್ ಕನ್ನಡಕ್ಕೆ ಅನುವಾದಿಸಿದ, ಸಂಸ್ಕೃತ ಕವಿ ರಾಜಶೇಖರ ಅವರು 1100 ವರ್ಷಗಳ ಹಿಂದೆ ಬರೆದಿದ್ದ ‘ಬಾಲ ರಾಮಾಯಣ’ ಕೃತಿ ಬಿಡುಗಡೆಗೊಳಿಸಿ, ಅವರು ಮಾತನಾಡಿದರು.

‘ಎಡ ಪಂಥ, ಬಲ ಪಂಥ ಎನ್ನುವುದು ಮನಸಿನ ವಿಕಲ್ಪ. ನಿಜವಾದ ಜಗತ್ತಿನಲ್ಲಿ ಎಡ– ಬಲ ಪಂಥಗಳು ಇಲ್ಲ. ಎರಡೂ ಪಂಥೀಯರಿಗೆ ಪರಸ್ಪರ ವಿಚಾರ ತಿಳಿದುಕೊಳ್ಳುವುದು ಬೇಡವಾಗಿದೆ. ಹೀಗಾಗಿ, ಈ ಎರಡೂ ಕಣ್ಣುಗಳಿಗೂ ದೃಷ್ಟಿಮಾಂದ್ಯ ಉಂಟಾಗಿದೆ’ ಎಂದರು.

ADVERTISEMENT

ಒಂದು ಕಣ್ಣಿಗೆ ಕಾಣುವ ಸತ್ಯವೇ ನಿಜವೆಂದುಕೊಳ್ಳುವ ಅಹಂಕಾರವು ಚಾಕು, ಚೂರಿ ತೆಗೆದುಕೊಂಡು ಹೋರಾಡುವ ಹಂತಕ್ಕೆ ತಲುಪಿಸುತ್ತಿದೆ. ಇಬ್ಬಗೆಯ ವಿಚಾರವನ್ನು ತಿಳಿದು, ಜ್ಞಾನವೆಂಬ ಮೂರನೇ ಕಣ್ಣಿನಿಂದ ಯೋಚಿಸುವ ಧೀಮಂತರಿಗೆ ಸತ್ಯ ಕಾಣಿಸುತ್ತಿದೆ. ಆದರೆ, ಮೂರನೇ ಕಣ್ಣಿನಿಂದ ನೋಡುವವರನ್ನು ಅಪಾಯಕಾರಿ ಮನುಷ್ಯರೆಂದು ಭಾವಿಸುವ ಕ್ಲಿಷ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜದ ಈ ಸ್ಥಿತಿಯನ್ನು ಬದಲಿಸಲು ಸಾಧ್ಯವೇ ಎಂಬ ಕುರಿತು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಅಕ್ಷರ ಸಲಹೆ ಮಾಡಿದರು.

ದೇಶದ ಬುದ್ಧಿಜೀವಿಗಳು ನೋಡುತ್ತಿರುವ ಸತ್ಯ ಬೇರೆಯಾದರೆ, ಸಾಮಾನ್ಯ ಜನರು ನೋಡುತ್ತಿರುವ ಸತ್ಯವೇ ಬೇರೆಯಾಗಿದೆ. ಇವೆರಡೂ ವರ್ಗ ನೋಡುವ ದೃಷ್ಟಿ ಬದಲಾಗಬೇಕಿದೆ. ಆಗ ನಿಜವಾದ ಸತ್ಯ ಗೋಚರಿಸುತ್ತದೆ ಎಂದು ಹೇಳಿದರು.

ಲೇಖಕ ಮಾಧವ ಚಿಪ್ಪಳಿ ಕೃತಿ ಪರಿಚಯಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ರಮೇಶ ಹಳೆಕಾನಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ಗಾಯತ್ರಿ ರಾಘವೇಂದ್ರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.