ADVERTISEMENT

ಗಣಿ ಬಾಧಿತ ವಿಜಯನಗರ ಜಿಲ್ಲೆ: ನಿಧಿ ವರ್ಗಾವಣೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 16:29 IST
Last Updated 21 ನವೆಂಬರ್ 2024, 16:29 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ಮೂಲಕ ಸಂಗ್ರಹಿಸಿರುವ ನಿಧಿಯಲ್ಲಿ ಶೇ 28ರಷ್ಟನ್ನು ನೂತನವಾಗಿ ರಚಿಸಲಾಗಿರುವ ವಿಜಯನಗರ ಜಿಲ್ಲೆಗೆ ವರ್ಗಾಯಿಸಬೇಕು ಎಂಬ ಆದೇಶಕ್ಕೆ ಸಂಬಂಧಿಸಿದಂತೆ ವಿವರಣೆ ಒದಗಿಸಿ’ ಎಂದು ಹೈಕೋರ್ಟ್‌, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಸಂಬಂಧ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ತೋರಣಗಲ್‌ನ, ‘ಧರಣಿ ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಘಟನೆ’ ಅಧ್ಯಕ್ಷ ವೈ.ಜಿ.ದಿಲೀಪ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಬಿ.ಜಿ.ಚಿದಾನಂದ ಅರಸ್, ‘ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ಮೂಲಕ ಸಂಗ್ರಹಿಸಲಾಗಿರುವ ₹1,700 ಕೋಟಿಯಲ್ಲಿ ನೂತನ ವಿಜಯನಗರ ಜಿಲ್ಲೆಗೆ ಈತನಕ ₹ 600 ಕೋಟಿ ವೆಚ್ಚ ಮಾಡಲಾಗಿದೆ. ಈ ಮೊತ್ತದಲ್ಲಿ 2022ರ ನಂತರದಿಂದ ಪ್ರತಿ ವರ್ಷ ಶೇ 28ರಷ್ಟನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 2022ರ ಮಾರ್ಚ್‌ 14ರಂದು ಆದೇಶ ಹೊರಡಿಸಿದೆ. ಆದರೆ, ಈ ಆದೇಶವು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ (ಪಿಎಂಕೆಕೆಕೆವೈ) ಮಾರ್ಗಸೂಚಿಗಳಿಗೆ ತದ್ವಿರುದ್ಧವಾಗಿದೆ’ ಎಂದು ಆಕ್ಷೇಪಿಸಿದರು.

ADVERTISEMENT

‘ಬಳ್ಳಾರಿ ಜಿಲ್ಲೆಯಲ್ಲಿ 2.33 ಲಕ್ಷ ಹೆಕ್ಟೇರ್ ಪ್ರದೇಶವು ಗಣಿ ಬಾಧಿತವಾಗಿದ್ದರೆ ವಿಜಯನಗರ ಜಿಲ್ಲೆಯಲ್ಲಿ 76 ಸಾವಿರ ಹೆಕ್ಟೇರ್ ಗಣಿ ಬಾಧಿತ ಪ್ರದೇಶವಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸಂಗ್ರಹವಾಗುವ ನಿಧಿಯಲ್ಲಿ ಶೇ 28ರಷ್ಟನ್ನು ವಿಜಯನಗರ ಜಿಲ್ಲೆಗೇ ನೀಡುವುದಾದರೆ, ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾಗಲಿದೆ. ಆದ್ದರಿಂದ, ಈ ಆದೇಶ ರದ್ದುಪಡಿಸಬೇಕು. ನಿಧಿ ವರ್ಗಾವಣೆಗೆ ನಿರ್ಬಂಧ ವಿಧಿಸಬೇಕು’ ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ್ ಕಾಮತ್, ‘ನಿಧಿ ವರ್ಗಾವಣೆ ಕುರಿತ ಆದೇಶದಲ್ಲಿ ಮಾರ್ಗಸೂಚಿಗಳ ಉಲ್ಲಂಘನೆ ಆಗಿಲ್ಲ’ ಎಂದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಈ ಹಂತದಲ್ಲಿ ನೋಟಿಸ್ ಜಾರಿಗೊಳಿಸುವುದಾಗಲೀ ಅಥವಾ ಮಧ್ಯಂತರ ಆದೇಶವನ್ನಾಗಲೀ ನೀಡಲಾಗದು. ನಿಧಿ ವರ್ಗಾವಣೆ ಆದೇಶಕ್ಕೆ ಸಂಬಂಧಿಸಿದಂತೆ ಮೊದಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ವಿವರಣೆ ಒದಗಿಸಲಿ. ನಂತರ ಮುಂದಿನ ಕ್ರಮದ ಬಗ್ಗೆ ಪರಿಶೀಲಿಸೋಣ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು 2025ರ ಜನವರಿ 7ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.