ನವದೆಹಲಿ: ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರದ ಸ್ವಾಮ್ಯದ ಎನ್ಎಂಡಿಸಿಗೆ ಬಳ್ಳಾರಿ ಜಿಲ್ಲೆಯ ಸಂಡೂರಿನ ಸ್ವಾಮಿಮಲೈ ಅರಣ್ಯದ 159 ಹೆಕ್ಟೇರ್ (399 ಎಕರೆ) ಪ್ರದೇಶವನ್ನು ಗುತ್ತಿಗೆ ನೀಡುವ ಪ್ರಸ್ತಾವನೆಗೆ ಮರುಜೀವ ಬಂದಿದೆ. ಯೋಜನೆಗೆ ಅನುಮೋದನೆ ಕೋರಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವನೆ (ಎಫ್‌ಪಿ/ಕೆಎ/ಎಂಐಎನ್/6858/2014) ಸಲ್ಲಿಕೆಯಾಗಿದೆ.
ಸ್ವಾಮಿಮಲೈ ಅರಣ್ಯದ 401.57 ಹೆಕ್ಟೇರ್ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣದ ಕಾರ್ಖಾನೆ ‘ದೇವದಾರಿ ಕಬ್ಬಿಣದ ಅದಿರು ಗಣಿ’ ನಡೆಸಲು ಉದ್ದೇಶಿಸಿದೆ. ಗಣಿಗಾರಿಕೆ ನಡೆಸುವ ಕಡತಕ್ಕೆ ಕೇಂದ್ರ ಭಾರಿ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜುಲೈ ತಿಂಗಳಲ್ಲಿ ಸಹಿ ಹಾಕಿದ್ದರು. ಅರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದರು. ಗಣಿಗಾರಿಕೆಗೆ ಜಮೀನು ಹಸ್ತಾಂತರ ವಿಚಾರದಲ್ಲಿ ಕೇಂದ್ರ– ರಾಜ್ಯ ಸರ್ಕಾರದ ನಡುವೆ ಸಂಘರ್ಷ ತೀವ್ರಗೊಂಡಿದೆ. ಆದರೆ, ಎನ್‌ಎಂಡಿಸಿಗೆ ಗಣಿ ಗುತ್ತಿಗೆ ನೀಡುವ ಪ್ರಸ್ತಾವನೆ ಮುನ್ನೆಲೆಗೆ ಬಂದಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆಯೇ.
ಗಣಿಗಾರಿಕೆಯಿಂದ ಅರಣ್ಯ ಹಾಗೂ ಜೀವವೈವಿಧ್ಯಕ್ಕೆ ಅಪಾರ ಹಾನಿಯಾಗಲಿದೆ ಎಂದು ಅರಣ್ಯ ಪಡೆಯ ಮುಖ್ಯಸ್ಥರು, ಬಳ್ಳಾರಿ ವೃತ್ತದ ಸಿಸಿಎಫ್ ಹಾಗೂ ಡಿಸಿಎಫ್ ಅಭಿಪ್ರಾಯ ವ್ಯಕ್ತಪಡಿಸಿ 2019ರಲ್ಲಿ ವರದಿ ಸಲ್ಲಿಸಿದ್ದರು. ಆ ಬಳಿಕ, ಈ ಪ್ರಸ್ತಾವನೆ ನನೆಗುದಿಗೆ ಬಿದ್ದಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.