ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದ (ಕೆಆರ್‌ಎಸ್) ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಉದ್ದೇಶಕ್ಕಾಗಿ ಸ್ಫೋಟ ಚಟುವಟಿಕೆ ನಡೆಸುತ್ತಿರುವ ಘಟಕಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಲು ‘ಜಲಾಶಯ ಸುರಕ್ಷತಾ ಸಮಿತಿ’ಗೆ ನೀಡಲಾಗಿದ್ದ ಅವಧಿಯನ್ನು ಹೈಕೋರ್ಟ್ ಪುನಃ ಆರು ತಿಂಗಳಿಗೆ ವಿಸ್ತರಿಸಿದೆ.
ಗಣಿಗಾರಿಕೆ ಪರವಾನಗಿ ನೀಡುವಾಗ ಜಿಲ್ಲಾಧಿಕಾರಿ ಭೂ ಪರಿವರ್ತನೆಗೆ ವಿಧಿಸಿದ್ದ ಷರತ್ತನ್ನು ಪ್ರಶ್ನಿಸಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಸಿ.ಜಿ.ಕುಮಾರ್ ಸಲ್ಲಿಸಿರುವ ಮೂಲ ಅರ್ಜಿಯ ಜೊತೆ ಸಲ್ಲಿಸಲಾಗಿರುವ ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎನ್.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.
‘ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರ ಮನವಿಯನ್ನು ಪುರಸ್ಕರಿಸಿ ಜಲಾಶಯ ಸುರಕ್ಷತಾ ಸಮಿತಿಗೆ ನೀಡಲಾಗಿರುವ ಅವಧಿಯನ್ನು ಪುನಃ ಆರು ತಿಂಗಳಿಗೆ ವಿಸ್ತರಿಸಲಾಗಿದೆ. ಅಷ್ಟರಲ್ಲಿ ಪರಿಶೀಲನೆ ಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು. ಸ್ಫೋಟ ಚಟುವಟಿಕೆ ನಡೆಸದೇ ಇರುವ ಅರ್ಜಿಗಳನ್ನು 30ರೊಳಗೆ ಇತ್ಯರ್ಥ ಮಾಡಬೇಕು’ ಎಂದು ನ್ಯಾಯಪಿಠ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
‘ಗಣಿಗಾರಿಕೆ ಪುನರಾರಂಭಕ್ಕೆ ಅನುಮತಿ ಕೋರಿರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಲಾಗುವುದು. ಅರ್ಜಿದಾರರು ಯಾವುದೇ ಸ್ಪೋಟ ಚಟುವಟಕೆ ನಡೆಸುವುದಿಲ್ಲ ಎಂಬ ಮುಚ್ಚಳಿಕೆ ನೀಡಬೇಕು. ಇದರ ಅನುಸಾರ ಸಮಿತಿಯು ಗಣಿಗಾರಿಕೆ ಇಲಾಖೆಯ ತಜ್ಞರ ಜೊತೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ಅಡ್ವೊಕೇಟ್ ಜನರಲ್ ಅವರ ವಿವರಣೆ ನ್ಯಾಯಯುತವಾಗಿದೆ’ ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.
‘ಕೆಆರ್‌ಎಸ್ ಜಲಾಯಶಯದ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಅದರಾಚೆಗೂ ಕೂಡಾ ಯಾವುದೇ ಕಲ್ಲು ಗಣಿಗಾರಿಕೆ ಹಾಗೂ ಸ್ಫೋಟ ಚಟುವಟಿಕೆಗಳಿಗೆ ಸಂಬಂಧಿಸಿದ ತಕರಾರುಗಳಿಗೆ ಪರಿಹಾರ ಪಡೆಯಲು, ಕರ್ನಾಟಕ ರಾಜ್ಯ ಜಲಾಶಯಗಳ ಸುರಕ್ಷತಾ ಸಮಿತಿಯ ಮುಂದೆಯೇ ಮನವಿ ಸಲ್ಲಿಸಬೇಕು. ಈ ವಿಚಾರದಲ್ಲಿ ಸಮಿತಿಯ ತೀರ್ಮಾನವೇ ಅಂತಿಮ’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮೊದಲು ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.