ಬೆಂಗಳೂರು: ಗದಗ ಜಿಲ್ಲೆಯ ಕಪ್ಪತಗುಡ್ಡ ಅರಣ್ಯ ಪ್ರದೇಶವನ್ನು ‘ವನ್ಯಜೀವಿ ಅಭಯಾರಣ್ಯ ತಾಣ’ ಎಂದು ಘೋಷಿಸಿರುವ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್ ಪುರಸ್ಕರಿಸಿದೆ.
ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಮೆಸರ್ಸ್ ರಾಮಗಡ ಮಿನರಲ್ಸ್ ಮತ್ತು ಮೈನಿಂಗ್ ಲಿಮಿಟೆಡ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಜಾ ಮಾಡಿದೆ.
‘ಅಧಿಸೂಚನೆ ಹೊರಡಿಸುವ ಮುನ್ನ ರಾಜ್ಯ ಸರ್ಕಾರ ಕಾನೂನು ಪ್ರಕ್ರಿಯೆ ಪಾಲಿಸಿದೆ. ಹೀಗಾಗಿ 2017ರ ಏಪ್ರಿಲ್ 11ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಯಾವುದೇ ಕಾನೂನು ಲೋಪವಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಏನಿದು ಪ್ರಕರಣ?: ‘ಕಪ್ಪತಗುಡ್ಡ ಮೀಸಲು ಅರಣ್ಯಪ್ರದೇಶದ 1233.05 ಚದರ ಕಿ.ಮೀ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪ ಅನ್ವೇಷಿಸಲು ನಮ್ಮ ಕಂಪನಿಗೆ ರಾಜ್ಯ ಸರ್ಕಾರ 2001ರಲ್ಲಿ ಪರವಾನಗಿ ನೀಡಿದೆ.
ಇದರನ್ವಯ ನಾವು 2017ರಲ್ಲಿ ಚಿನ್ನದ ಗಣಿಗಾರಿಕೆಗೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದೆವು. ಆದರೆ, ರಾಜ್ಯ ಸರ್ಕಾರ 2013ರಲ್ಲಿ ಕಪ್ಪತಗುಡ್ಡ ಅರಣ್ಯವನ್ನು ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಿದೆ. ಇದರಿಂದ ನಮಗೆ ನೀಡಲಾಗಿದ್ದ ಗಣಿಗಾರಿಕೆ ಪರವಾನಗಿ ಕಳೆದುಕೊಂಡಂತಾಗಿದೆ’ ಎಂದು ಆಕ್ಷೇಪಿಸಿ ಅರ್ಜಿದಾರರರು ಹೈಕೋರ್ಟ್ ಮೆಟ್ಟಿಲೇರಿದ್ದರು.
‘ನಾವು ಈಗಾಗಲೇ ಚಿನ್ನದ ನಿಕ್ಷೇಪ ಸ್ಥಳವನ್ನು ಗುರುತಿಸಿದ್ದೇವೆ. ಬೃಹತ್ ಮೊತ್ತದ ಬಂಡವಾಳ ಹೂಡಿ ಸಂಸ್ಕರಣಾ ಘಟಕವನ್ನೂ ಆರಂಭಿಸಿದ್ದೇವೆ. ಹೀಗಿರುವಾಗ ನಮ್ಮ ಗಣಿಗಾರಿಕೆ ಪರವಾನಗಿ ನಿರಾಕರಿಸಿದ ಕ್ರಮ ಸರಿಯಲ್ಲ. ಆದ್ದರಿಂದ ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು ಮತ್ತು ಗಣಿಗಾರಿಕೆ ನಡೆಸಲು ನಾವು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಕೋರಿದ್ದರು.
ಕಪ್ಪತಗುಡ್ಡದ ಒಟ್ಟು ಭೂಪ್ರದೇಶ 79,930 ಎಕರೆ. ಇದರಲ್ಲಿ 44,163 ಎಕರೆಯನ್ನು ಸರ್ಕಾರ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಿದೆ. ಈ ಸಂರಕ್ಷಿತ ಪ್ರದೇಶದ ಜತೆಗೆ ಹೆಚ್ಚುವರಿಯಾಗಿ 16,168 ಎಕರೆ ಪ್ರದೇಶವನ್ನೂ ಸೇರಿಸಿ ‘ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ’ ಎಂದು ಘೋಷಿಸಿದೆ.
ಪ್ರಶಂಸನೀಯ: ‘ಈ ಆದೇಶವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ದೃಷ್ಟಿಯಿಂದ ಮಹತ್ವದ್ದಾಗಿದೆ. ಕಪ್ಪತಗುಡ್ಡ ಸಂರಕ್ಷಣೆಗಾಗಿ ಸರ್ಕಾರ ಮತ್ತು ನ್ಯಾಯಾಂಗ ತೋರಿರುವ ಕಾಳಜಿ ಪ್ರಶಂಸನೀಯ’ ಎಂದು ಅರ್ಜಿದಾರರ ಪರ ವಕೀಲ ಎಸ್.ಬಸವರಾಜ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.