‘ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದುಹಾಕಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.
ಅಶ್ವತ್ಥ ನಾರಾಯಣ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಸಚಿವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಸಾಮೂಹಿಕ ವಾಗ್ದಾಳಿಗೆ ಇಳಿದಿದ್ದು, ವಿಧಾನಸಭೆಯಲ್ಲೂ ಗುರುವಾರ ಈ ವಿಷಯ ಪ್ರತಿಧ್ವನಿಸಿತು.
ಮೋದಿ, ಶಾ ಉತ್ತರ ಹೇಳಲಿ: ಸಿದ್ದರಾಮಯ್ಯ
‘ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದರೆ ಏನರ್ಥ? ಜನರನ್ನು ರಕ್ಷಿಸಬೇಕಾದ ಸಚಿವರೇ (ಅಶ್ವತ್ಥನಾರಾಯಣ) ಹೀಗೆ ಹೇಳಿದ್ದು ಸರೀನಾ? ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಉತ್ತರಿಸಲಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿಯದ್ದು ಹೊಡಿ, ಬಡಿ, ಕಡಿ ಸಂಸ್ಕೃತಿ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಕೊಂದವರು ಇವರು. ಆರ್‌ಎಸ್ಎಸ್‌ನವರು ಈ ರೀತಿ ಹೇಳಿಕೆ ಕೊಡಿಸಿದ್ದಾರೆ’ ಎಂದು ದೂರಿದರು.
ಸಂಪುಟದಿಂದ ವಜಾಗೊಳಿಸಿ: ‘ಇಂತಹ ಹೇಳಿಕೆ ನೀಡಿದ ಅಶ್ವತ್ಥ ನಾರಾಯಣ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಅವರು ರಾಜ್ಯಪಾಲರನ್ನು ಒತ್ತಾಯಿಸಿದರು.
‘ನಾನು ದೂರು ಕೊಡಲ್ಲ. ಪೊಲೀಸರೇ ಸ್ವಯಂಪ್ರೇರಿತರಾಗಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಯೋಗ್ಯವಾದ ಪ್ರಕರಣವಿದು. ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಿ’ ಎಂದರು.
‘ಸೋಲಿನ ಭಯದಿಂದ ಹೇಳಿಕೆ’: ಗದಗ ಜಿಲ್ಲೆಯಲ್ಲಿ ನಡೆದ ‘ಪ್ರಜಾಧ್ವನಿ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಚುನಾವಣೆ ಯಲ್ಲಿ ಸೋಲಿನ ಭಯದಲ್ಲಿದೆ. ಹೀಗಾಗಿ, ಪ್ರಚೋದನಕಾರಿ ಹೇಳಿಕೆ ನೀಡುತ್ತಿದೆ’ ಎಂದರು.
ಹುಬ್ಬಳ್ಳಿ, ಆಳಂದದಲ್ಲಿ ದೂರು:
ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಗಿರೀಶ ಗದಿಗೆಪ್ಪಗೌಡರ ಇಲ್ಲಿನ ಗೋಕುಲ ರಸ್ತೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
‘ದೂರು ಕುರಿತು ಮಂಡ್ಯ ಪೊಲೀಸರ ಗಮನಕ್ಕೆ ತರಲಾಗಿದೆ. ಒಂದು ವೇಳೆ ಅಲ್ಲಿ ಪ್ರಕರಣ ದಾಖಲಾಗಿದ್ದರೆ, ಇದನ್ನು ಅಲ್ಲಿಗೆ ವರ್ಗಾಯಿಸಲಾಗುವುದು. ಇಲ್ಲದಿದ್ದರೆ, ಎಫ್‌ಐಆರ್ ಮಾಡಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಶಾಸಕರೂ ಆಗಿರುವ ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಅವರು ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಕಲಬುರಗಿ ಎಸ್‌ಪಿಯವರಿಗೂ ರವಾನಿಸಿದ್ದಾರೆ.
‘ಬೊಮ್ಮಾಯಿ, ಬಿಎಸ್‌ವೈ ಸ್ಪಷ್ಟನೆ ನೀಡಲಿ’
ಮೈಸೂರು: ‘ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ದರಾಮಯ್ಯ ಅವರನ್ನೂ ಕಳುಹಿಸಬೇಕು ಎಂದು ಸಚಿವ ಅಶ್ವತ್ಥನಾರಾಯಣ ನೀಡಿರುವ ಹೇಳಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ಕೊಡಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೆಗೆಯೋಕೆ ಸಿದ್ದರಾಮಯ್ಯ ಅವರದ್ದು ಟಗರಿನ ತಲೆಯೇ? ಟಿಪ್ಪು ಸುಲ್ತಾನರ ತಲೆಯನ್ನು ಉರಿಗೌಡ– ನಂಜಗೌಡ ತೆಗೆದಿದ್ದಾರೆಂಬ ಇತಿಹಾಸ ನನಗಂತೂ ಗೊತ್ತಿಲ್ಲ. ಬರೀ ನಾಟಕ. ಟಿಪ್ಪು ಸಾಧನೆಯ ಬಗ್ಗೆ ರಾಷ್ಟ್ರಪತಿಗಳೇ ಸದನದಲ್ಲಿ ಮಾತನಾಡಿದ್ದಾರೆ. ಆಗ ಬೊಮ್ಮಾಯಿ, ಯಡಿಯೂರಪ್ಪ ಅಲ್ಲೇ ಇದ್ದರಲ್ಲವೇ’ ಎಂದರು.
ವಿಷಾದ ವ್ಯಕ್ತಪಡಿಸಿದ ಸಚಿವ
ಬೆಂಗಳೂರು:‘ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಎಂಬ ಅರ್ಥದಲ್ಲಿ ನಾನು ಹೇಳಿದ್ದೇನೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಗೌರವವಿದೆ. ಬೇರೆ ಯಾವುದೇ ಅರ್ಥದಲ್ಲೂ ಅವರನ್ನು ಟೀಕಿಸಿಲ್ಲ. ನನ್ನ ಮಾತುಗಳಿಂದ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿ, ‘ರಾಜ್ಯದಲ್ಲಿ ಎಲ್ಲ ಕಡೆಗಳಲ್ಲೂ ದ್ವೇಷದ ಮಾತುಗಳು ಕೇಳಿ ಬರುತ್ತಿವೆ. ಸಚಿವ ಅಶ್ವತ್ಥ ನಾರಾಯಣ ಅವರೂ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕುವುದಾಗಿ ಹೇಳಿದ್ದಾರೆ. ಇದು ಅಕ್ಷಮ್ಯ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ‘ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ಕಾರ್ಯಕರ್ತರ ರ್‍ಯಾಲಿ ನಡೆದಿತ್ತು. ಆಗ ಸಿದ್ದರಾಮಯ್ಯ ಅವರನ್ನು ಟಿಪ್ಪು ಜತೆಗೆ ಹೋಲಿಸಿ ಮಾತನಾಡಿದೆ. ಟಿಪ್ಪು ಬಗ್ಗೆ ಸಿದ್ದರಾಮಯ್ಯ ಅವರಿಗೆ ಒಂದು ರೀತಿಯಲ್ಲಿ ಪ್ರೀತಿ ಇದೆ. ನರಹಂತಕ ಟಿಪ್ಪುವನ್ನು ವೈಭವೀಕರಿಸಿ ಮಾತನಾಡುತ್ತಾರೆ ಎಂದು ಹೇಳಿದ್ದು ನಿಜ. ಆದರೆ, ಸಿದ್ದರಾಮಯ್ಯ ಬಗ್ಗೆ ಅಗೌರವದಿಂದ ಮಾತನಾಡಿಲ್ಲ. ಮಂಡ್ಯ ಜಿಲ್ಲೆಯ ಆಡು ಭಾಷೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು ಎಂದು ಹೇಳಿದ್ದೆ. ನನ್ನ ಮಾತುಗಳಿಂದ ಅವರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದರು.
ಯು.ಟಿ.ಖಾದರ್ ಮಾತನಾಡಿ, ‘ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಾ, ಟಿಪ್ಪುವನ್ನು ಹೊಡೆದ ರೀತಿಯಲ್ಲಿ ಹೊಡೆಯಬೇಕು ಎಂದು ಸಚಿವರು ಹೇಳಿದ್ದಾರೆ. ಇವರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಅಶ್ವತ್ಥನಾರಾಯಣ ವಿರುದ್ದ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಸದಸ್ಯರಾದ ತನ್ವೀರ್ ಸೇಠ್, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಅವರೂ ಆಗ್ರಹಿಸಿದರು.
ಸಿದ್ದರಾಮಯ್ಯ ನಮ್ಮ ರಾಜಕೀಯ ವಿರೋಧಿ ಮಾತ್ರ, ಶತ್ರು ಅಲ್ಲ. ಅಶ್ವತ್ಥನಾರಾಯಣ ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ. ಆ ಹೇಳಿಕೆಯನ್ನು ಸಿದ್ದರಾಮಯ್ಯ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಸಿ.ಟಿ. ರವಿ,ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಸಚಿವ ಅಶ್ವತ್ಥ ನಾರಾಯಣ ಜನರನ್ನು ಕೆರಳಿಸಿ, ಪ್ರಚೋದಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಒಂದು ಕೂದಲನ್ನು ಕೊಂಕಿಸಲೂ ಸಾಧ್ಯವಿಲ್ಲ.
ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.