ತುಮಕೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬ ಪ್ರಬುದ್ಧ ಮತ್ತು ಪಳಗಿದ ರಾಜಕಾರಣಿ. ಅವರನ್ನು ಯಾರೂ ಆಟವಾಡಿಸಲು ಸಾಧ್ಯವಿಲ್ಲ. ಬೇಕಾದರೇ ಅವರೇ ಬೇರೆಯವರನ್ನು ಆಟವಾಡಿಸಬಲ್ಲರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.
ಬಿಜೆಪಿ ವರಿಷ್ಠರು ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಅವಕಾಶ ನೀಡದೇ ಆಟವಾಡಿಸುತ್ತಿದ್ದಾರೆ ಎಂದು ಸುದ್ದಿಗಾರರು ಶುಕ್ರವಾರ ಕೇಳಿದಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ವೈದ್ಯರು ಆಪರೇಷನ್ ಮಾಡುವಾಗ ರೋಗಿ ಉಳಿಯಬೇಕು ಅನ್ನುವ ಉದ್ದೇಶ ಹೊಂದಿರುತ್ತಾರೆ. ಅದಕ್ಕಾಗಿ ಬಿಪಿ, ಶುಗರ್ ನಿಯಂತ್ರಣಕ್ಕೆ ಬಂದ ನಂತರ ಆಪರೇಷನ್ ಮಾಡುತ್ತಾರೆ. ಅದೇ ತತ್ವವನ್ನು ವರಿಷ್ಠರು ಅನುಸರಿಸುತ್ತಿದ್ದಾರೆ. ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಗೋಡ್ಸೆಗೆ ಹೋಲಿಸಿರುವ ಕುರಿತು ಪ್ರತಿಕ್ರಿಯಿಸಿ, ‘ಕೆಲವರು ಗಾಂಧಿ ಹೆಸರು ಇಟ್ಟುಕೊಂಡು ತಾವೂ ಮಹಾತ್ಮ ಗಾಂಧಿ ಅಂದುಕೊಂಡಿದ್ದಾರೆ. ಗಾಂಧಿಯ ಹೆಸರಿಟ್ಟುಕೊಳ್ಳುವುದು, ಅವರಂತೆ ವೇಷ ಧರಿಸುವುದು ಸುಲಭ. ಆದರೆ, ಮಹಾತ್ಮ ಗಾಂಧಿಯಾಗುವುದು ಸುಲಭವಲ್ಲ. ಗೋಡ್ಸೆ ಗಾಂಧಿಯ ದೇಹ ಮಾತ್ರ ಕೊಂದರೆ, ಕಾಂಗ್ರೆಸ್ ಗಾಂಧಿಯ ತತ್ವಗಳನ್ನು ಕೊಂದಿದೆ. ಈ ಮೂಲಕ ಗೋಡ್ಸೆಗೂ ಮೀರಿದ ಅನ್ಯಾಯವನ್ನು ಕಾಂಗ್ರೆಸ್ ಮಾಡಿದೆ ಎಂದು ಆರೋಪಿಸಿದರು.
ಗಾಂಧಿ ತತ್ವರಹಿತ ರಾಜಕಾರಣ ಮಾಡಬಾರದು ಎಂದು ಬಯಸಿದ್ದರು. ಆದರೆ, ಕಾಂಗ್ರೆಸ್ ತತ್ವರಹಿತ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ಗೆ ದೇಶಕ್ಕಿಂತ ಓಟ್ಬ್ಯಾಂಕ್ ಮುಖ್ಯವಾಗಿದೆ. ರಾಹುಲ್ ಗಾಂಧಿಯ ಪ್ರತಿಯೊಂದು ಮಾತು ಅವರ ಹತಾಷೆ, ಅಪ್ರಬುದ್ಧತೆ ತೋರಿಸುತ್ತಿದೆ. ಮುಸಲೋನಿ ಸೈನ್ಯದಲ್ಲಿ ರಾಹುಲ್ ತಾತ ಇದ್ದರೆಂದು ಕೇಳಿದ್ದೇನೆ. ಬಹುಶಃ ಆ ಒಂದು ಬೆರಕೆಯ ಮಾತುಗಳನ್ನು ಇಲ್ಲಿ ರಾಹುಲ್ ಆಡುತ್ತಿದ್ದಾರೆ. ಅವರು ಮುಂದಿನ ಪ್ರಧಾನಿ ಎಂಬುದು, ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸ ಕಂಡಂತಾಗಿದೆ ಎಂದು ವ್ಯಂಗ್ಯವಾಡಿದರು.
ದೆಹಲಿಯಲ್ಲಿ ವ್ಯಕ್ತಿಯೊಬ್ಬ ಪ್ರತಿಭಟನಾ ನಿರತರ ಮೇಲೆ ಗುಂಡಿನ ದಾಳಿ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ‘ಪ್ರಜಾಪ್ರಭುತ್ವದಲ್ಲಿ ಬಂದೂಕಿಗೆ ಅವಕಾಶವಿಲ್ಲ. ಇಲ್ಲಿ ಬ್ಯಾಲೆಟ್‌ಗೆ ಅವಕಾಶ ಇದೆಯೇ ಹೊರತು, ಬುಲೆಟ್‌ಗೆ ಅಲ್ಲ. ಹಾಗಾಗಿ ತಪ್ಪಿತಸ್ಥ ಯಾರೇ ಇರಲಿ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದು ನನ್ನ ಆಗ್ರಹವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.