ADVERTISEMENT

ವನ್ಯಜೀವಿ ಕಾರ್ಯಾಚರಣೆ: ಸಿಬ್ಬಂದಿಗೆ ತರಬೇತಿ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 16:13 IST
Last Updated 5 ಡಿಸೆಂಬರ್ 2023, 16:13 IST
<div class="paragraphs"><p>ಸಚಿವ ಈಶ್ವರ ಬಿ. ಖಂಡ್ರೆ</p></div>

ಸಚಿವ ಈಶ್ವರ ಬಿ. ಖಂಡ್ರೆ

   

ಬೆಳಗಾವಿ: ‘ಕಾಡಾನೆ ಸೇರಿದಂತೆ ವನ್ಯಮೃಗಗಳನ್ನು ಹಿಡಿಯಲು ರಚಿಸಿರುವ ಕಾರ್ಯಪಡೆಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಸೂಚಿಸಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್, ಎನ್‌.ಎಸ್‌. ಬೋಸರಾಜು ಮತ್ತು ಕೆ.ಎನ್. ರಾಜಣ್ಣ ಮತ್ತು ಈ ಮೂರೂ ಜಿಲ್ಲೆಗಳ ಶಾಸಕರ ಜೊತೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಖಂಡ್ರೆ ಮಂಗಳವಾರ ಸಭೆ ನಡೆಸಿದರು.

ADVERTISEMENT

‘ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಿರುವ ಒಂಬತ್ತು ಜಿಲ್ಲೆಗಳಿಗೆ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ವಾರದಲ್ಲಿ ಕನಿಷ್ಠ ಎರಡು ದಿನ ನಿಯೋಜಿತ ಜಿಲ್ಲೆಯಲ್ಲೇ ಉಳಿದು ಪರಿಸ್ಥಿತಿ ನಿಭಾಯಿಸುವಂತೆ ಸೂಚಿಸಲಾಗಿದೆ’ ಎಂದರು.

‘ಆನೆ ನಾಡಿಗೆ ಬಾರದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಬಜೆಟ್‌ನಲ್ಲಿ ₹ 100 ಕೋಟಿ ಹಂಚಿಕೆ ಮಾಡಲಾಗಿದೆ. ಆನೆ ಹಾವಳಿ ಹೆಚ್ಚಾಗಿರುವ ಕಡೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದ್ದು, ಆನೆಗಳ ಸಮಸ್ಯೆ ಇರುವ ಭಾಗದ ಶಾಸಕರ ಜೊತೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಾಗುವುದು’ ಎಂದರು.

‘ಆನೆಗಳಿಗೆ ಕಾಡಿನ ಒಳಗೆ ಆಹಾರ ಸಿಗುತ್ತಿಲ್ಲ ಎಂಬ ದೂರಿದೆ. ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಆ ಸಂಖ್ಯೆಯನ್ನು ಹೆಚ್ಚಿಸಬೇಕು. ಪುಂಡಾನೆ ಹಿಡಿಯಲು ಕ್ರಮ ಕೈಗೊಳ್ಳಬೇಕು’ ಎಂದು ಕೆ.ಜೆ ಜಾರ್ಜ್ ಸಲಹೆ ನೀಡಿದರು.

‘ಕಾಡಾನೆ ದಾಳಿ ನಾಡಿಗೆ ಬರದಂತೆ ತಡೆಯಲು ವೈಜ್ಞಾನಿಕವಾಗಿ ವಿದ್ಯುತ್ ತಂತಿ ಬೇಲಿ ಹಾಕಿದರೂ ಅವು ಅತ್ಯಂತ ಬುದ್ದಿವಂತಿಕೆಯಿಂದ ದಾಟಿ ಬರುತ್ತವೆ. ಆನೆ ತಡೆಯಲು ಹೊಸ ವ್ಯವಸ್ಥೆ ರೂಪಿಸಬೇಕಾಗಿದೆ. ಆನೆಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಎನ್‌.ಎಸ್‌. ಬೋಸರಾಜು ಹೇಳಿದರು.

‘ವನ್ಯಜೀವಿ-ಮಾನವ ಸಂಘರ್ಷ ತಡೆಯಲು ಕ್ರಮ ಕೈಗೊಳ್ಳಲೇಬೇಕು. ಜೊತೆಗೆ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ದೊರಕಿಸಲು ಈ ಅಧಿವೇಶನದಲ್ಲೇ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು’ ಎಂದು ಸಭೆಯಲ್ಲಿದ್ದ ಶಾಸಕರು ಆಗ್ರಹಿಸಿದರು.

ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕರಾದ ಸಿಮೆಂಟ್ ಮಂಜು, ನಯನಾ ಮೋಟಮ್ಮ, ಟಿ.ಡಿ. ರಾಜೇಗೌಡ, ಎಚ್‌.ಕೆ. ಸುರೇಶ್, ಎ.ಎಸ್‌.ಪೊನ್ನಣ್ಣ, ಶ್ರೀನಿವಾಸ್, ಮಂಥರ್ ಗೌಡ ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.