ಬೆಂಗಳೂರು: ‘ಬಹಳಷ್ಟು ಕಡೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ತಿರುಚಲಾಗಿದೆ. ಯಾವ ಸಂದರ್ಭದಲ್ಲಿ, ಯಾವ ರಾಜ್ಯದಲ್ಲಿ ಮತ್ತು ಯಾವ ಕ್ಷೇತ್ರದಲ್ಲಿ ಇವಿಎಂ ತಿರುಚಬೇಕು ಎನ್ನುವುದನ್ನು ಬಿಜೆಪಿಯರು ಕಾರ್ಯಯೋಜನೆ ಮಾಡಿಕೊಂಡಿದ್ದಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ದೂರಿದರು.
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಜಾರ್ಖಂಡ್‌ನಲ್ಲಿ ಇವಿಎಂ ಯಾಕೆ ತಿರುಚಿಲ್ಲವೆಂದರೆ, ಕೆಲವು ಕಡೆ ಬಿಟ್ಟು ಬಿಡುತ್ತಾರೆ. ಗೆದ್ದೇ ಗೆಲ್ಲುತ್ತೇವೆ ಎನ್ನುವ ಕ್ಷೇತ್ರಗಳನ್ನು ಬಿಟ್ಟು, ಬೇರೆ ಕ್ಷೇತ್ರಗಳಲ್ಲಿ ಈ ಕೃತ್ಯ ಮಾಡುತ್ತಾರೆ’ ಎಂದರು.
‘ಹ್ಯಾಕ್ ಮಾಡುವುದರಲ್ಲಿ ಬಿಜೆಪಿಗರು ನಿಪುಣರು. ಜಾರ್ಖಂಡ್‌ನಲ್ಲಿ ಜೆಎಂಎಂ ಪಕ್ಷದಿಂದ ತಮಗೆ ಏನೂ ತೊಂದರೆ ಇಲ್ಲ ಎಂಬ ಕಾರಣದಿಂದ ಬಿಟ್ಟರು. ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಿದ್ದರೆ ಅಲ್ಲೂ ತಿರುಚುತ್ತಿದ್ದರು’ ಎಂದರು.
‘ಬಹಳ ಬುದ್ಧಿ ಉಪಯೋಗಿಸಿ ಇವಿಎಂ ಹ್ಯಾಕ್ ಮಾಡುತ್ತಾರೆ. ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಬಳಿಕ ಬಿಜೆಪಿಯಲ್ಲಿ ದೊಡ್ಡ ನಾಯಕತ್ವ ಇರಲಿಲ್ಲ. ಅದಕ್ಕೆ ತಿರುಚುವುದನ್ನು ಬಿಟ್ಟರು. ಒಂದು ರಾಜ್ಯ ಬಿಟ್ಟು ಬಿಡುತ್ತಾರೆ. ಆಗ ಇವಿಎಂ ಹ್ಯಾಕ್ ಮಾಡುವುದಿಲ್ಲವೆಂಬ ನಂಬಿಕೆ ಬರುತ್ತದೆ’ ಎಂದರು.
‘ಕಳೆದ 15 ವರ್ಷಗಳಿಂದ ಇವಿಎಂ ಬೇಡ ಎನ್ನುತ್ತಿದ್ದೇವೆ. ಈ ಬಗ್ಗೆ ಚಿದಂಬರಂ, ಕಪಿಲ್ ಸಿಬಲ್, ಜೈರಾಂ ರಮೇಶ್ ನೇತೃತ್ವದ ಎಐಸಿಸಿ ಸಮಿತಿ ಚುನಾವಣೆ ಆಯೋಗಕ್ಕೆ ಮನವಿಯನ್ನೂ ಸಲ್ಲಿಸಿದೆ. ತಾಂತ್ರಿಕವಾಗಿ ಹ್ಯಾಕ್ ಮಾಡಲು ಸಾಧ್ಯವಿದೆ ಎಂಬುದನ್ನೂ ತೋರಿಸಲಾಗಿದೆ. ಅಮೆರಿಕ, ಯುರೋಪ್ ಸೇರಿದಂತೆ ಬೇರೆ ದೇಶಗಳಲ್ಲಿ ಮತ ಪತ್ರ ಬಳಸುತ್ತಿದ್ದಾರೆ. ಮತ ಪತ್ರ ಬಳಕೆಗೆ ತೊಂದರೆ ಏನು? ಎಲ್ಲಿವರೆಗೆ ನಮ್ಮ ದೇಶದಲ್ಲಿ ಇವಿಎಂ ಇರುತ್ತದೆಯೊ ಅಲ್ಲಿಯವರೆಗೆ ಕಾಂಗ್ರೆಸ್ ಅಥವಾ ಇತರ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಮಾತು ಚರ್ಚೆಯಲ್ಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.