ಬೆಳಗಾವಿ:'ಮಹಾರಾಷ್ಟ್ರದಲ್ಲಿ ಎಣ್ಣೆ- ನೀರು ಬೆರೆಸಿ ಸರ್ಕಾರ ಮಾಡಿದ್ದವು. ಆ ಎಡಬಿಡಂಗಿ ಸರ್ಕಾರವನ್ನು ಶಿವಸೇನೆ ಪಕ್ಷದ ಕಾರ್ಯಕರ್ತರೇ ಕಿತ್ತೆಸೆದಿದ್ದಾರೆ. ಅಲ್ಲಿ ಬಿಜೆಪಿ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಬರಲಿದೆ. ಕಾದು ನೋಡಿ'ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
'ಮಹಾರಾಷ್ಟ್ರದಲ್ಲಿ ಈಗ ಇರುವುದು ಮೂರಾಬಟ್ಟೆ ಸರ್ಕಾರ. ಎನ್‍ಸಿಪಿ, ಕಾಂಗ್ರೆಸ್, ಶಿವಸೇನೆ ಸೇನೆ ಸೇರಿ ಸರ್ಕಾರ ಮಾಡಿದರೆ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಜನ ಬೇಗ ಎಚ್ಚೆತ್ತುಕೊಂಡು ಮಹಾರಾಷ್ಟ್ರವನ್ನು ಕಾಪಾಡಿದ್ದಾರೆ'ಎಂದು ಅವರು ನಗರದಲ್ಲಿ ಸೋಮವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
'ಹಿಂದೆ ಮುಂಬೈನಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿತ್ತು. ಆ ದಬ್ಬಾಳಿಕೆ ತಡೆಯುವ ನಿಟ್ಟಿನಲ್ಲಿ ಬಾಳಾಸಾಹೇಬ್ ಠಾಕ್ರೆ ಅವರು ಬಲಿಷ್ಠ ಶಿವಸೇನೆ ಕಟ್ಟಿದ್ದರು. ಶಿವಸೇನೆ, ಕಾಂಗ್ರೆಸ್ ಎಂದಿಗೂ ಸೇರಲು ಸಾಧ್ಯವಿಲ್ಲ. ಬಾಳಾಸಾಹೇಬ್ ಅವರು ಇದ್ದಿದ್ದರೆ ಇಂಥ ಅಚಾತುರ್ಯಕ್ಕೆ ಆಸ್ಪದ ಕೊಡುತ್ತಿರಲಿಲ್ಲ. ಅಧಿಕಾರದ ಆಸೆಗೆ ಉದ್ಧವ್ ಠಾಕ್ರೆ ಕಾಂಗ್ರೆಸ್ ಜತೆಗೆ ಕೈಜೋಡಿಸಿದರು. ಪರಿಣಾಮ ಅವರದೇ ಪಕ್ಷದ ಶಾಸಕರು ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತತ್ವ, ಸಿದ್ಧಾಂತ ಇಲ್ಲ. ಇಂಥ ಪಕ್ಷದ ಜತೆಗೆ ಒಂದಾದವರು ದಿವಾಳಿಯಾಗಿದ್ದು ಇತಿಹಾಸದುದ್ದಕ್ಕೂ ನಡೆದುಬಂದಿದೆ'ಎಂದು ಮೂದಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.