ಬೆಂಗಳೂರು: ‘ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಟಿಎಸ್‌ಪಿ) ಯೋಜನೆಯಡಿ ಮೀಸಲಿಟ್ಟ ಅನುದಾನವನ್ನು ಯಾವುದೇ ಕಾರಣಕ್ಕೂ ಬೇರೆಡೆಗೆ ವರ್ಗಾಯಿಸದೇ ಪರಿಶಿಷ್ಟರ ಅಭಿವೃದ್ಧಿಗೇ ಬಳಸಬೇಕು’ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಶುಕ್ರವಾರ ಎಂಟೂವರೆ ಗಂಟೆ ಸುದೀರ್ಘ ಸಭೆ ನಡೆಸಿದ ಅವರು, ‘ಯೋಜನೆಯ ಅನುಕೂಲಗಳು ಮಧ್ಯವರ್ತಿಗಳಿಲ್ಲದೆ, ನಿಜವಾದ ಫಲಾನುಭವಿಗಳಿಗೆ ತಲುಪಬೇಕು’ ಎಂದು ತಿಳಿಸಿದರು.
ಯಾವ ಇಲಾಖೆಯವರು ಯಾವ ರೀತಿಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದರೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದ ಸದ್ಬಳಕೆ ಸಾಧ್ಯ ಎಂಬುದನ್ನು ವಿವರಿಸಿದ ಸಚಿವರು, ಪರಿಶಿಷ್ಟ ಜಾತಿಯ ಜನರ ಶಿಕ್ಷಣ, ಆರೋಗ್ಯ, ಆಹಾರ, ಕೌಶಲ ತರಬೇತಿಯೊಂದಿಗೆ ಅವರ ಘನತೆಯ ಬದುಕಿಗೆ ಪೂರಕವಾಗಿ ಆಡಳಿತ ನೀಡಬೇಕು ಎಂದೂ ಸಲಹೆ ನೀಡಿದರು.
‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಡಿ ಈ ಹಿಂದೆ ನೀಡಿದ್ದ ಅನುದಾನವನ್ನು ಇಲಾಖೆಗಳು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಕಾಯ್ದೆಯ ನಿಯಮಾವಳಿಯಂತೆ ಹಣವನ್ನು ಪರಿಶಿಷ್ಟ ಜಾತಿಯ ಜನರ ಏಳಿಗೆಗೆ ಮಾತ್ರ ಬಳಸಬೇಕು. ಇನ್ನು ಮುಂದೆ ನಿಯಮ ಉಲ್ಲಂಘಿಸಿದರೆ ಕ್ರಮಕೈಗೊಳ್ಳುವುದು ಖಚಿತ’ ಎಂದು ಎಚ್ಚರಿಕೆ ನೀಡಿದರು.
‘ಕಾಯ್ದೆಗಳನ್ನು ಮಾಡುವುದು ಜನರ ಅನುಕೂಲಕ್ಕಾಗಿಯೇ ಹೊರತು ಉಲ್ಲಂಘಿಸಲು ಅಲ್ಲ. ಹೀಗಾಗಿ, ಈ ಕಾಯ್ದೆಯಡಿ ನಿಗದಿಪಡಿಸಿರುವ ಅನುದಾನವನ್ನು ಎಲ್ಲ ಇಲಾಖೆಗಳು ಸಮರ್ಪಕವಾಗಿ ಬಳಸಿಕೊಂಡು, ತಳ ಸಮುದಾಯದ ಜನರ ಬದುಕಿಗೆ ನೆರವಾಗಬೇಕು. ಜೊತೆಗೆ, ಎಲ್ಲ ಇಲಾಖೆಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಬೇಕು’ ಎಂದೂ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.