ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವ ನಿರ್ಧಾರವನ್ನು ಸಚಿವ ಕೆ.ಎ.ಎಸ್. ಈಶ್ವರಪ್ಪ ವಿರೋಧಿಸಿದರು.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ರಾಜ್ಯದ ಎಲ್ಲ ಕಡೆಗಳಲ್ಲೂ ಒಂದೇ ಪರಿಸ್ಥಿತಿ ಇಲ್ಲ. ಕೋವಿಡ್ ಪ್ರಕರಣ ಜಾಸ್ತಿ ಇರುವ ಜಿಲ್ಲೆಗಳಲ್ಲಿ ಅಂತಹ ಕ್ರಮ ಕೈಗೊಳ್ಳಲಿ. ಕೋವಿಡ್ ಪ್ರಕರಣ ಕಡಿಮೆ ಇರುವ ಜಿಲ್ಲೆಗಳಿಗೆ ನಿಯಂತ್ರಣ ಬೇಡ' ಎಂದರು.
'ಇಂದು ನಡೆಯುವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಹೇಳಿದರು.
'ಕೋವಿಡ್ ಇರುವುದು ನಿಜ. ಹಾಗೆಂದು ಎಲ್ಲ ಕಡೆಯಲ್ಲೂ ಕರ್ಫ್ಯೂ ಜಾರಿಗೊಳಿಸಲು ಸಾಧ್ಯವಿಲ್ಲ. ರಾತ್ರಿ ಕರ್ಫ್ಯೂ ಆದೇಶ ಶಿವಮೊಗ್ಗ ಜಿಲ್ಲೆಯನ್ನು ತಲುಪಿಯೇ ಇಲ್ಲ. ನಮ್ಮ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಇಲ್ಲ, ಸುಡುಗಾಡೂ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆರೋಗ್ಯದ ಬಗ್ಗೆ ಯೋಚಿಸಲಿ: ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ನಡೆಸುವ ಮುನ್ನ ಆರೋಗ್ಯದ ಬಗ್ಗೆ ಯೋಚಿಸಬೇಕು ಎಂದು ಈಶ್ವರಪ್ಪ ಸಲಹೆ ನೀಡಿದರು.
'ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಲ್ಲರೂ ಈ ರಾಜ್ಯದ ಆಸ್ತಿ. ಅವರು ಆರೋಗ್ಯವಾಗಿ ಇರಬೇಕು ಎಂಬುದು ನಮ್ಮ ಆಸೆ. ಈ ಕಾರಣದಿಂದ ಪಾದಯಾತ್ರೆ ಮಾಡಬೇಡಿ ಎಂದು ಮನವಿ ಮಾಡುತ್ತೇವೆ. ಹಟ ಹಿಡಿದರೆ ಏನು ಮಾಡಲು ಸಾಧ್ಯ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.